ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ರಾಜ್‌ ಕುಮಾರ್‌ ಅಪಾರ ಅಭಿಮಾನ ಇರಿಸಿದ್ದರು-ನಾಡೋಜ ಡಾ.ಮಹೇಶ ಜೋಶಿ

ಬೆಂಗಳೂರು: ಕನ್ನಡ ನಾಡಿನ ಶಕ್ತಿ, ಕನ್ನಡಿಗರ ಅಭಿಮಾನ, ನಾಡು ನುಡಿಗೆ ಧೀಶಕ್ತಿ ತುಂಬಿದ ಧೀಮಂತ, ಕನ್ನಡದ ಮೇರು ವ್ಯಕ್ತಿತ್ವದ ವರನಟ ಡಾ. ರಾಜ್‌ಕುಮಾರ್‌ ಅಂದರೆ ರೋಮಾಂಚನ. ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ಅವರಿಗೆ ಇರುವ ನಂಬಿಕೆ ಹಾಗೂ ಅಭಿಮಾನವನ್ನು ಎಂದೂ ಪರಿಷತ್ತು ಮರೆಯುವಂತಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ತಿಳಿಸಿದರು.

ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಳ್ಳಲಾದ ಡಾ. ರಾಜ್‌ಕುಮಾರ್‌ ಸಂಸ್ಕೃತಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ನಾಡೋಜ ಡಾ. ಮಹೇಶ ಜೋಶಿ ಅವರು ದೇಶದಲ್ಲಿ ಕನ್ನಡಕ್ಕೆ  ಅಗ್ರಸ್ಥಾನ ಸಿಕ್ಕಿದ್ದು ಮಾನ್ಯ ಶ್ರೀ ಎಚ್‌.ಡಿ.ದೇವೇಗೌಡರು ಪ್ರಧಾನ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ. ಆ ಸಂದರ್ಭದಲ್ಲಿ ದೇಶದ ಎಲ್ಲಾ ಆಯಕಟ್ಟಿನ ಜಾಗದಲ್ಲಿ ಕನ್ನಡಿಗರೇ ಇದ್ದರು. ಈ ಸನ್ನಿವೇಶವನ್ನು ಕಂಡ ಡಾ. ರಾಜ್‌ಕುಮಾರ ಅವರು ಕನ್ನಡಿಗರು ದೇಶ ಆಳುತ್ತಿರುವ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡು ಬರುತ್ತಿದ್ದರು. ಅದೇ ಕಾಲಕ್ಕೆ ಅವರಿಗೆ ಪ್ರತಿಷ್ಠಿತ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಬಂದಾಗ ಅವರಿಗೆ ಬಂದಿರುವ ಒಂದು ಲಕ್ಷ ರೂ ನಗದನ್ನು ನೇರವಾಗಿ ತಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ಇಡುವ ಮೂಲಕ ಪರಿಷತ್ತಿನ ಮೇಲಿರುವ ವಿಶ್ವಾಸವನ್ನು ಎತ್ತಿ ತೊರಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಅತಿ ವಿಶ್ವಾಸಾರ್ಹ ಸಂಸ್ಥೆ, ಜೊತೆಗೆ ಇದೊಂದು ಮಾದರಿ ಸಂಸ್ಥೆ, ಇದನ್ನು ರಾಜ್‌ ಕುಮಾರ್‌ ಅವರು ಸರಸ್ವತಿ ಮಂದಿರವೆಂದೇ ಕರೆಯುತ್ತಿದ್ದರು, ಕನ್ನಡ ಭಾಷೆಯನ್ನು ಅಜರಾಮರವಾಗಿರಿಸಲು ನಿತ್ಯವೂ ಪ್ರಯತ್ನ ಮಾಡುತ್ತಿರುವ ಪರಿಷತ್ತಿಗಿಂತ ನಂಬಿಗಸ್ಥ ಸಂಸ್ಥೆ ಇನ್ನೊಂದಿಲ್ಲ ಎಂದು ಡಾ. ರಾಜ್‌ಕುಮಾರ್‌ ಅವರು ಕೊಂಡಾಡಿದ್ದರು ಎಂದು ನಾಡೋಜ ಡಾ. ಮಹೇಶ ಜೋಶಿ ಅವರು ಹಳೆಯ ನೆನಪುಗಳನ್ನು ನೆನೆದುಕೊಂಡರು.

 ಪ್ರಪಂಚದಲ್ಲಿಯೇ ಅತೀ ಹೆಚ್ಚು ಅಭಿಮಾನಿಗಳ ಸಂಘವನ್ನು ಹೊಂದುವ ಮೂಲಕ ಎಲ್ಲರ ಗೌರವಕ್ಕೆ ಪಾತ್ರರಾದ ನಮ್ಮ ಮೇರು ನಮ್ಮ ನಟಸಾರ್ವಭೌಮ ಡಾ. ರಾಜ್‌ ಅವರ ಹೆಸರಿನಲ್ಲಿ ೫೦೦೦ಕ್ಕೂ ಹೆಚ್ಚು ಅಭಿಮಾನಿಗಳ ಸಂಘಗಳಿವೆ. ಸುಮಾರು ೭೦೦ಕ್ಕೂ ಹೆಚ್ಚು ಪ್ರತಿಮೆಗಳು ನಾಡಿನಾದ್ಯಂತ ಕಂಡು ಬರುತ್ತದೆ. ಬೆಂಗಳೂರು ಮಹಾನಗರವೊಂದರಲ್ಲೇ ಸುಮಾರು ೭೦ ಡಾ. ರಾಜ್‌ಕುಮಾರ್‌ ಅವರ ಪ್ರತಿಮೆ ಇರುವುದು ಗಮನಿಸಿದಾಗ ಅವರ ಮಹತ್ವ ಎಷ್ಟು ಎನ್ನುವುದು ನಾವು ಕನ್ನಡಿಗರು ಹೆಮ್ಮೆಯಿಂದ ತಿಳಿದುಕೊಳ್ಳಬೇಕಾಗಿದೆ. ಇಂದು ಅವರ ಹೆಸರಿನಲ್ಲಿ ಇರುವ ಡಾ. ರಾಜ್‌ಕುಮಾರ್‌ ಸಂಸ್ಕೃತಿ ದತ್ತಿ ಪ್ರಶಸ್ತಿಯನ್ನು ಪಡೆದಿರುವ ಪದ್ಮಭೂಷಣ ಡಾ. ಬಿ. ಸರೋಜಾದೇವಿಯವರು ಅಪ್ಪಟ ಕನ್ನಡದ ಪ್ರತಿಭೆ. ದೇಶದ ಎಲ್ಲಾ ಪ್ರಮುಖ ಭಾಷೆಯಲ್ಲಿ ನಟಿಸಿದ ಅವರು ಕನ್ನಡದ ಕುಮಾರ ತ್ರಯರೊಂದಿಗೆ ಅಭಿನಯಿಸಿದ  ಅವರಲ್ಲಿ ಸೌಂದರ್ಯ ಪ್ರಜ್ಞೆ, ಉತ್ಕೃಷ್ಟ ನಡವಳಿಕೆ ಹಾಗೂ ಸೌಜನ್ಯದಿಂದಲೇ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಅಭಿಪ್ರಾಯ ಪಟ್ಟರು.

 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ನಿರ್ಮಾಪಕರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಶ್ರೀ ಎಸ್‌.ಎ. ಚೆನ್ನೇಗೌಡ ಅವರು ಡಾ. ರಾಜ್‌ಕುಮಾರ್‌ ಸಂಸ್ಕೃತಿ ದತ್ತಿ ಪ್ರಶಸ್ತಿ ನಾಡಿನ ಅತ್ಯಂತ  ಗೌರವಾನ್ವಿತ ಪ್ರಶಸ್ತಿ. ಇತರ ಯಾವುದೇ ಪ್ರಶಸ್ತಿಗಳನ್ನು ಈ ದತ್ತಿ ಪ್ರಶಸ್ತಿಯ ಜೊತೆ ಹೊಲಿಕೆ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಈ ಬಾರಿ ಈ ಪ್ರಶಸ್ತಿಗೆ ಆಯ್ಕೆಯಾಗಿರುವ ಬಿ. ಸರೋಜಾದೇವಿಯವರು ಪಂಚಭಾಷಾ ತಾರೆ, ನಟನೆಯಲ್ಲಿ ಅವರು ಸಾಕ್ಷಾತ್‌ ಶಾರದೆ.  ಅಪ್ಪಟ ಕನ್ನಡದ ಪ್ರತಿಭೆಯನ್ನು ಗುರುತಿಸಿ ಈ ಡಾ. ರಾಜ್‌ಕುಮಾರ್‌ ಸಂಸ್ಕೃತಿ ದತ್ತಿ ಪ್ರಶಸ್ತಿ ನೀಡುತ್ತಿರುವುದು ಅಕ್ಷರಷಃ ಸ್ತುತ್ಯಾರ್ಹ ಎಂದು ಹೇಳಿದ್ದರು.

ಖ್ಯಾತ ಹಿನ್ನೆಲೆ ಗಾಯಕಿ ನಾಡೋಜ ಡಾ. ಬಿ.ಕೆ. ಸುಮಿತ್ರಾ  ಅವರು ಡಾ. ರಾಜ್‌ಕುಮಾರ್‌ ಸಂಸ್ಕೃತಿ ದತ್ತಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ ವರನಟ ಡಾ. ರಾಜ್‌ಕುಮಾರ್‌ ಅವರ ಬಗ್ಗೆ ಮಾತನಾಡಲು ನಮ್ಮಲ್ಲಿ ಇರುವ ಪದಗಳು ಸಾಲದು. ಅವರ ವ್ಯಕ್ತಿತ್ವವೇ ಅಂತಹದ್ದು, ಅದು ವರ್ಣಿಸಲು ಅಸಾಧ್ಯವಾಗಿರುವುದು. ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದಲ್ಲಿ ಕುಳಿತು ಕನ್ನಡದ ಸೇವೆಯಲ್ಲಿ ತೊಡಗಿರುವ ನಾಡೋಜ ಡಾ. ಮಹೇಶ ಜೋಶಿ ಅವರು ತನ್ನ ಜೀವನದಲ್ಲಿ  ಮರೆಯಲಾರದ ವ್ಯಕ್ತಿ. ದೂರದರ್ಶನದಲ್ಲಿ ಇದ್ದಾಗ ಅದೆಷ್ಟೋ ಬೆಳಕು ಕಾಣದ ಕಲಾವಿದರನ್ನು ಹುಡುಕಿ ಅವಕಾಶಕೊಟ್ಟ ಮಹಾನುಭಾವರು. ಅದೇ ರೀತಿ ಅತೀ ಜನಪ್ರಿಯ ಕಾರ್ಯಕ್ರಮವಾದ ʻಮಧುರ ಮಧುರವೀ ಮಂಜುಳಗಾನʼ ಕ್ಕೆ ನನ್ನ ಹಾಡನ್ನೇ ಶೀರ್ಷಿಕೆಗಾಯನ ಮಾಡುವ ಮೂಲಕ ಒಂದು ಅರ್ಥದಲ್ಲಿ ನನ್ನ ಹಾಡಿಗೆ ಮರುಜೀವ ಕೊಟ್ಟವರು ಎಂದು ಹಳೆಯ ನೆನಪುಗಳನ್ನು ನೆನಪು ಮಾಡಿ ಕೊಂಡರು. ಪ್ರೇಕ್ಷರ ಒತ್ತಾಯದ ಮೇರೆಗೆ ʻ ಸಂಪಿಗೆ ಮರದಾ ಹಸಿರೆಲೆ ಮೇಲೆ ಕೋಗಿಲೆ ಹಾಡಿತ್ತುʼ, ಮಧುರ ಮಧುರವೀ ಮಂಜುಳಗಾನʼ ಹಾಗೂ ʼನಂಬಿದೆ ನಿನ್ನಾ ನಾಗಭರಣಾ ಕಾಯೋ ಕರುಣಾಮಯ ನನ್ನʼ ಹಾಡುಗಳ ಸಾಲುಗಳನ್ನು ಹಾಡಿದರು.

 ೨೦೨೩ನೆಯ ಸಾಲಿನ ʻಡಾ. ರಾಜ್ಕಮಾರ್‌ ಸಂಸ್ಕೃತಿ ದತ್ತಿ ಪ್ರಶಸ್ತಿʼ ಸ್ವೀಕರಿಸಿದ ಖ್ಯಾತ ಹಿರಿಯ ಚಲನಚಿತ್ರ ಕಲಾವಿದೆ ಪದ್ಮಭೂಷಣ ಡಾ. ಬಿ. ಸರೋಜಾದೇವಿ ಅವರು ಮಾತನಾಡಿ ತಮಗೆ ದೇಶದಲ್ಲಿ ಏನೆಲ್ಲಾ ಪ್ರಶಸ್ತಿಗಳು ಸಿಕ್ಕಿವೆ. ಆದರೆ ಅದ್ಯಾವುದು ಈ ಡಾ. ರಾಜ್‌ಕುಮಾರ್‌ ಸಂಸ್ಕೃತಿ ದತ್ತಿ ಪ್ರಶಸ್ತಿಗೆ ಸರಿ ಸಮವಲ್ಲ. ಅದಕ್ಕೆ ಕಾರಣ  ಡಾ. ರಾಜಕುಮಾರ್‌ ಅವರು ತನ್ನ ಹೆಮ್ಮೆಯ ನಾಯಕ ನಟ. ಅವರೊಂದಿಗೆ ನಟಿಸಿದ ಚಿತ್ರಗಳು, ಅವರ ಜೊತೆ ಇರುವಾಗ ನಾನು ಕಲಿತ  ಶಿಸ್ತು, ಜವಾಬ್ದಾರಿಯ ಕಾರಣವೇ ಹೆಚ್ಚಿನ ಅಭಿನಯವನ್ನು ಕಲಿಯುವುದಕ್ಕೆ ಕಾರಣವಾಗಿದ್ದು. ಅವರ ನಟನೆಗೆ ಸರಿದೂಗಿಸಲು  ನಾವು ಕಷ್ಟಪಟ್ಟು ಅಭಿನಯಮಾಡಬೇಕಾಗುತ್ತಿತ್ತು. ಅದರ ಪರಿಣಾಮವೇ ಜನ ಮೆಚ್ಚುವ ಪಾತ್ರಗಳನ್ನು ಮಾಡುವುದಕ್ಕೆ ಕಾರಣವಾಗಿದ್ದು ಎಂದು ಹೇಳಿದರು.

  ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶ್ರೀ ನೇ.ಭ.ರಾಮಲಿಂಗ ಶೆಟ್ಟಿ ಅವರು ಸ್ವಾಗತಿಸಿದರು, ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಮ್‌.ಪಟೇಲ್‌ ಪಾಂಡು ಅವರು ಕಾರ್ಯಕ್ರಮ ನಿರೂಪಿಸಿದರು, ಪರಿಷತ್ತಿನ ಪ್ರಕಟಣಾ ವಿಭಾಗದ ಮುಖ್ಯಸ್ಥರಾದ ಪ್ರೊ. ಎನ್‌.ಎಸ್‌. ಶ್ರೀಧರ ಮೂರ್ತಿ ಅವರು ಪ್ರಶಸ್ತಿ ಪುರಸ್ಕೃತರ ವಿವರಣೆ ನೀಡಿದರು, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜು ಅವರು ವಂದಿಸಿದರು.

ಛಾಯಾಚಿತ್ರ- ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಳ್ಳಲಾದ ೨೦೨೩ನೆಯ ಸಾಲಿನ ಡಾ. ರಾಜ್ಕಮಾರ್‌ ಸಂಸ್ಕೃತಿ ದತ್ತಿ ಪ್ರಶಸ್ತಿಯನ್ನು  ಖ್ಯಾತ ಹಿರಿಯ ಚಲನಚಿತ್ರ ಕಲಾವಿದೆ ಪದ್ಮಭೂಷಣ ಡಾ. ಬಿ. ಸರೋಜಾದೇವಿ ಅವರಿಗೆ ಪ್ರಧಾನ ಮಾಡಲಾಯಿತು.

Related posts

ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ:  ಸಿದ್ಧರಾಮಯ್ಯ ನಮ್ಮ ನಾಯಕರು, ಅವರೇ ನಮ್ಮ ಸಿಎಂ- ಸಂಸದ ಡಿ.ಕೆ ಸುರೇಶ್.

ಮಕ್ಕಳಿಗೆ ಸಂಸ್ಕಾರದ ಅರಿವು ಮೂಡಿಸುವುದು ಅಗತ್ಯ- ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ

ಬಿಎಲ್ ಸಂತೋಷ್ ಮೊದಲು ಬಿಜೆಪಿಯಲ್ಲಿರುವವರನ್ನ ಉಳಿಸಿಕೊಳ್ಳಲಿ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟಾಂಗ್.