ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳು

ಅತಿ ವೇಗದಲ್ಲಿ ಕರಗುತ್ತಿದೆ ಹಿಮ: ಎದುರಾಯ್ತು ಅಪಾಯದ ಆತಂಕ.

ಡೆಹ್ರಾಡೂನ್: ಹಿಮ ಅತಿವೇಗವಾಗಿ ಕರಗುತ್ತಿದ್ದು, ಭವಿಷ್ಯದಲ್ಲಿ ಭಾರಿ ಕಂಟಕ ಸೃಷ್ಟಿಸುವ ಸಾಧ್ಯತೆ ಇದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಹೌದು, ಕೈಗಾರಿಕೆಗಳ ಅತಿಯಾದ ಹೊಗೆ ಸೇರಿದಂತೆ ನಾನಾ ಕಾರಣಗಳಿಗೆ ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ. ಇದರಿಂದಾಗಿ ಹಿಮರಾಶಿ ಅಪಾಯಕ್ಕೆ ಸಿಲುಕಿವೆ. ಹಿಮನದಿಗಳು ಕರಗಲು ಕಾರಣಗಳ ಬಗ್ಗೆ ವಿಜ್ಞಾನಿಗಳು ನಿರಂತರ ಸಂಶೋಧನೆಯಲ್ಲಿ ತೊಡಗಿದ್ದಾರೆ.

ಉತ್ತರಾಖಂಡದ ಹಿಮಾಲಯ ಪ್ರದೇಶಗಳಲ್ಲಿ ಸುಮಾರು ಒಂದು ಸಾವಿರ ಹಿಮನದಿಗಳಿವೆ. ಇವುಗಳಲ್ಲಿ ಗಂಗೋತ್ರಿ ಜಲಾನಯನ ಪ್ರದೇಶದಲ್ಲಿ ಇರುವ ಹಿಮನದಿಗಳು ವೇಗವಾಗಿ ಕರಗುತ್ತಿದೆ. ವಾಡಿಯಾ ಇನ್ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿಯ ವಿಜ್ಞಾನಿಗಳ ಮಾಹಿತಿಯ ಪ್ರಕಾರ, ಗಂಗೋತ್ರಿ ಗ್ಲೇಸಿಯರ್ 1935 ರಿಂದ 2022 ರ ವರೆಗೆ ಅಂದರೆ 87 ವರ್ಷಗಳಲ್ಲಿ ಸುಮಾರು 1726.9 ಮೀಟರ್ ಗಳಷ್ಟು ಹಿಂದಕ್ಕೆ ಸಾಗಿದೆ. ಇದು ಸುಮಾರು ಒಂದೂವರೆ ಕಿಲೋಮೀಟರ್ಗಿಂತ ಹೆಚ್ಚಾಗಿದೆ.

2017 ಮತ್ತು 2022 ರ ನಡುವೆ ಗಂಗೋತ್ರಿ ಹಿಮನದಿಯ ಕರಗುವಿಕೆಯ ಪ್ರಮಾಣವು ತುಂಬಾ ವೇಗವಾಗಿದೆ. ಈ ಐದು ವರ್ಷಗಳಲ್ಲಿ ಗಂಗೋತ್ರಿ ಹಿಮನದಿ ಸುಮಾರು 169 ಮೀಟರ್ಗಳಷ್ಟು ಹಿಂದಕ್ಕೆ ಜಾರಿದೆ. ಅಂದರೆ, ಹಿಮನದಿಯ ಕರಗುವಿಕೆಯ ಪ್ರಮಾಣವು ವಾರ್ಷಿಕವಾಗಿ 33.8 ಮೀಟರ್ ಆಗಿದೆ. ಕಳೆದ 87 ವರ್ಷಗಳಲ್ಲಿ ಈ ಐದು ವರ್ಷಗಳು (2017 ರಿಂದ 2022) ಗಂಗೋತ್ರಿ ಹಿಮನದಿಯ ಕರಗುವಿಕೆಯ ಪ್ರಮಾಣವು ಅತ್ಯಂತ ವೇಗದ್ದಾಗಿದೆ ಎಂದು ಹಿಮಾಲಯನ್ ಜಿಯಾಲಜಿಯ ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗಂಗೋತ್ರಿ ಗ್ಲೇಸಿಯರ್ ವೇಗವಾಗಿ ಕರಗಲು ಶುರು ಮಾಡಿದ್ದು, ಸುಮಾರು 17 ವರ್ಷಗಳಿಂದೀಚೆಗೆ. ಈ ಹಿಂದೆಯೂ ಹಿಮನದಿಗಳು ಕರುಗುತ್ತಿದ್ದವು. ಆದರೆ, ದಾಖಲೆಯ ಪ್ರಮಾಣದಲ್ಲಿ ಕರಗಲು ಶುರು ಮಾಡಿದ್ದು, ಈ ವರ್ಷಗಳಲ್ಲಿ. ಈ ಅವಧಿಯಲ್ಲಿ ಹಿಮನದಿ ಬಹಳ ವೇಗವಾಗಿ ಹಿಂದೆ ಸರಿದಿದ್ದು, ಕಂಡು ಬಂದಿವೆ ಎಂಬುದು ದಾಖಲೆಗಳು ಹೇಳುತ್ತವೆ.

ಅಧ್ಯಯನ ವರದಿಯ ಪ್ರಕಾರ, 1968 ರಿಂದ 1980 ರ ನಡುವೆ ಸುಮಾರು 323.2 ಮೀಟರ್ ಹಿಮನದಿ ಕರಗಿದೆ. ಅಂದರೆ 26.93 ಮೀಟರ್ ಹಿಮನದಿ ವಾರ್ಷಿಕವಾಗಿ ಕರಗಿದಂತಾಗಿದೆ. 1968 ರಿಂದ 1980 ಮತ್ತು 2017 ರಿಂದ 2022 ರ ನಡುವಿನ ಸಮಯವು ಹಿಮನದಿಗೆ ತುಂಬಾ ಹಾನಿಯುಂಟು ಮಾಡಿದ ಅವಧಿಯಾಗಿದೆ. ಹಿಮನದಿಗಳು ಕರಗುತ್ತಿರುವ ವಾರ್ಷಿಕ ವೇಗ 15ರಿಂದ 20 ಮೀಟರ್ ಆಗಿದೆ ಎಂದು ವಾಡಿಯಾ ನಿರ್ದೇಶಕ ಡಾ.ಕಲಚಂದ್ ಸಾಯಿ ತಿಳಿಸಿದ್ದಾರೆ.

 

Related posts

ಪ್ಲಾಸ್ಟಿಕ್ ಅತಿಯಾಗಿ ಬಳಸುವುದರಿಂದ ಪರಿಸರಕ್ಕೆ ಹಾನಿ-ಪೂರ್ಣಿಮಾ ಸುನೀಲ್ 

ಜನಸಾಮಾನ್ಯರಿಗೆ ಗುಡ್ ನ್ಯೂಸ್: LPG ಗ್ಯಾಸ್ ಸಿಲಿಂಡರ್ ದರ 200 ರೂ. ಇಳಿಕೆ

ರೈತರ  ಕಾವೇರಿ ನದಿ ನೀರು ಹೋರಾಟಕ್ಕೆ ನಿರ್ಮಲಾನಂದನಾಥ ಶ್ರೀಗಳು ಸಾಥ್.