ಶಿವಮೊಗ್ಗ : ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ, ತಾಲ್ಲೂಕು ಸಮಿತಿ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ಪ್ರತಿ ಪ್ರೌಢಶಾಲಾ ಅಂಗಳದಲ್ಲಿ ಕನ್ನಡ ಪಠ್ಯ ಆಧರಿಸಿ ಒಂದು ದಿನದ ಕಮ್ಮಟ ನಡೆಸಲು ಯೋಜಿಸಿದ್ದೇವೆ. ಮಕ್ಕಳಿಗೆ ಪಠ್ಯ ಪುಸ್ತಕದಲ್ಲಿನ ಸಾಹಿತ್ಯ, ಓದು, ಅರಿವು, ರಸಸ್ವಾದ ಸೇರಿದಂತೆ ವಿದ್ಯಾರ್ಥಿಗಳೇ ಬರೆಯುವಂತೆ ಪ್ರೇರೇಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಶೈಕ್ಷಣಿಕ ವರ್ಷದಲ್ಲಿ ಪ್ರತಿ ಬಾರಿ ನಡೆಸುವಂತೆ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ನಡೆಯುವ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಆಯ್ಕೆ ಈ ಕಮ್ಮಟದಲ್ಲಿ ನಡೆಯಲಿದೆ.
ಸೆಪ್ಟೆಂಬರ್ 09 ರಂದು ಶನಿವಾರ ಬೆಳಿಗ್ಗೆ 10:30 ಕ್ಕೆ ದುರ್ಗಿಗುಡಿಯಲ್ಲಿರುವ ಸರ್ಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಮೊದಲ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಸೆ. 13 ರಂದು ಗಾಜನೂರಿನ ಜವಾಹರಲಾಲ್ ನೆಹರೂ ನವೋದಯ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಕಮ್ಮಟ ನಡೆಸಲಾಗುವುದು. ಕಥೆ, ಕವನ, ಪ್ರಬಂಧ ಗಳನ್ನು ಓದುವ, ಬರೆಯುವ ರಸಗ್ರಹಣದ ಕ್ರಮಗಳನ್ನು ಕಮ್ಮಟ ದಲ್ಲಿ ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ಮಾಡಲಿದ್ದಾರೆ ಎಂದು ಡಿ. ಮಂಜುನಾಥ ವಿವರಿಸಿದ್ದಾರೆ.