ಶಿವಮೊಗ್ಗ: ಮೇ ತಿಂಗಳಿನಲ್ಲಿ ರೈಲ್ವೆ ಜನರಲ್ ಮ್ಯಾನೇಜರ್‍ರವರೊಂದಿಗೆ ಹುಬ್ಬಳ್ಳಿಯಲ್ಲಿ ನಡೆಸಲಾದ ಸಭೆಯಲ್ಲಿ ಹಾಗೂ ಇತ್ತೀಚೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‍ರವರನ್ನು ದೆಹಲಿಯಲ್ಲಿ ಭೇಟಿ ಮಾಡಿ ವಿವಿಧ ರೈಲ್ವೆ ಯೋಜನೆಗಳ ಬಗ್ಗೆ ಮನವಿ ಸಲ್ಲಿಸಿದ ಸಮಯದಲ್ಲಿಯೇ ಹಾರನಹಳ್ಳಿ, ಕುಂಸಿ ಮತ್ತು ಅರಸಾಳು ರೈಲ್ವೆ ನಿಲ್ದಾಣಗಳಲ್ಲಿ ಎಕ್ಸ್‍ಪ್ರೆಸ್ ರೈಲುಗಳ ನಿಲುಗಡೆ ಮಾಡುವಂತೆ ವಿನಂತಿ ಮಾಡಲಾಗಿತ್ತು.
ಈ ಸಂಬಂಧ ನೈರುತ್ಯ ರೈಲ್ವೆ ವಲಯದಿಂದ ರೈಲ್ವೆ ಬೋರ್ಡ್‍ಗೆ ಪ್ರಸ್ತಾವನೆ ಸಲ್ಲಿಸಲಾಗಿರುವುದನ್ನು ಸಚಿವರ ಗಮನಕ್ಕೆ ತಂದು ರೈಲು ನಿಲುಗಡೆ ಘೋಷಣೆ ಮಾಡುವಂತೆ ಒತ್ತಾಯಿಸಲಾಗಿತ್ತು.
ಪ್ರಸ್ತುತ ಇದೀಗ ನೈರುತ್ಯ ರೈಲ್ವೆ ವಲಯ ಈ ಕೆಳಕಂಡ ಎರಡು ಎಕ್ಸ್‍ಪ್ರೆಸ್ ರೈಲುಗಳಿಗೆ ಕುಂಸಿ ಮತ್ತು ಅರಸಾಳುವಿನಲ್ಲಿ ನಿಲುಗಡೆ ನೀಡಲು ತಾತ್ವಿಕವಾಗಿ ಒಪ್ಪಿಗೆ ನೀಡಿದ್ದು, ಇದೇ ಗುರುವಾರ 24ರಿಂದ ರೈಲುಗಳಿಗೆ ನಿಲುಗಡೆ ಮಾಡಲಾಗುತ್ತಿದೆ.
ಹಾರನಹಳ್ಳಿಯಲ್ಲಿ ರೈಲು ನಿಲುಗಡೆ ಬಗ್ಗೆ ಸ್ಪಷ್ಟನೆ ನೀಡಿರುವ ನೈರುತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ರವರು ಹಾರನಹಳ್ಳಿ ರೈಲ್ವೆ ನಿಲ್ದಾಣವು ಕುಂಸಿ ರೈಲ್ವೆ ನಿಲ್ದಾಣಕ್ಕೆ ಕೇವಲ 5-6 ಕಿ.ಮೀ. ಒಳಗಡೆ ಇರುವುದರಿಂದ, ತಾಂತ್ರಿಕವಾಗಿ ರೈಲು ನಿಲುಗಡೆ ಕಷ್ಟಸಾಧ್ಯವೆಂದು ತಿಳಿಸಿದ್ದಾರೆ. ಆದಾಗ್ಯೂ ಮುಂದಿನ ದಿನಗಳಲ್ಲಿ ಹಾರನಹಳ್ಳಿಯಲ್ಲಿಯೂ ಸಹ ರೈಲು ನಿಲುಗಡೆಗೆ ಒತ್ತಾಯ ಮಾಡಲಾಗುವುದು.
ಪ್ರಸ್ತುತ ನಮ್ಮ ಹಲವು ದಿನಗಳ ಬೇಡಿಕೆಯನ್ನು ಈಡೇರಿಸಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರವರಿಗೆ, ರೈಲ್ವೆ ಬೋರ್ಡ್‍ನವರಿಗೆ, ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್‍ರವರಿಗೆ, ರೈಲ್ವೆ ಮೈಸೂರು ಡಿವಿಜನಲ್ ಮ್ಯಾನೇಜರ್ ಶಿಲ್ಪಿ ಅಗರವಾಲ್‍ರವರಿಗೆ ಶಿವಮೊಗ್ಗ ಕ್ಷೇತ್ರದ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ.
ಪ್ರಾಯೋಗಿಕವಾಗಿ ನೀಡಲಾಗುತ್ತಿರುವ ಈ ನಿಲುಗಡೆಯ ಕೊಡುಗೆಯನ್ನು ಪ್ರಯಾಣಿಕರು ಸಮರ್ಥವಾಗಿ ಬಳಕೆ ಮಾಡಿಕೊಂಡಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ಈ ನಿಲುಗಡೆಯನ್ನು ಮುಂದುವರೆಸುವ ಸಾಧ್ಯತೆಗಳಿರುವುದರಿಂದ, ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಾರ್ವಜನಿಕರಲ್ಲಿ ವಿನಂತಿಸುತ್ತೇನೆ.
ಬಾಕ್ಸ್:
1. 16205 : ತಾಳಗುಪ್ಪ-ಮೈಸೂರು ಎಕ್ಸ್ ಪ್ರೆಸ್ ರೈಲಿಗೆ ಅರಸಾಳು ನಿಲ್ದಾಣದಲ್ಲಿ ಸಂಜೆ 4.03ಕ್ಕೆ ಮತ್ತು ಕುಂಸಿ ರೈಲು ನಿಲ್ದಾಣದಲ್ಲಿ ಸಂಜೆ 4.21ಕ್ಕೆ ನಿಲುಗಡೆ ಮಾಡಲಾಗುವುದು.
2. 16206 : ಮೈಸೂರು-ತಾಳಗುಪ್ಪ ಎಕ್ಸ್‍ಪ್ರೆಸ್ ರೈಲಿಗೆ ಕುಂಸಿ ನಿಲ್ದಾಣದಲ್ಲಿ ಬೆಳಿಗ್ಗೆ 11.31ಕ್ಕೆ ಮತ್ತು ಅರಸಾಳು ರೈಲು ನಿಲ್ದಾಣದಲ್ಲಿ 11.48ಕ್ಕೆ ನಿಲುಗಡೆ ಮಾಡಲಾಗುವುದು
3. 16228 : ತಾಳಗುಪ್ಪ-ಮೈಸೂರು ಎಕ್ಸ್‍ಪ್ರೆಸ್ ರೈಲಿಗೆ ಅರಸಾಳು ರೈಲು ನಿಲ್ದಾಣದಲ್ಲಿ ರಾತ್ರಿ 10.05ಕ್ಕೆ ನಿಲುಗಡೆ ಮಾಡಲಾಗುವುದು.
4. 16227 : ಮೈಸೂರು-ತಾಳಗುಪ್ಪ ಎಕ್ಸ್‍ಪ್ರೆಸ್ ರೈಲಿಗೆ ಅರಸಾಳು ರೈಲು ನಿಲ್ದಾಣದಲ್ಲಿ ಬೆಳಿಗ್ಗೆ 5.45ಕ್ಕೆ ನಿಲುಗಡೆ ಮಾಡಲಾಗುವುದು.
ಸೂಚನೆ : (ಪರಿಪೂರ್ಣ ವೇಳಾಪಟ್ಟಿಯನ್ನು ರೈಲ್ವೆ ಇಲಾಖೆಯು ಸದ್ಯದಲ್ಲಿಯೇ ಬಿಡುಗಡೆ ಮಾಡುತ್ತದೆ)