ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ವ್ಯಾಜ್ಯಮುಕ್ತ ರಾಜ್ಯಕ್ಕಾಗಿ ಮುಂದಾದ ಸರ್ಕಾರ: ಶೀಘ್ರ ಬರಲಿವೆ ಹಳ್ಳಿಕೋರ್ಟ್ ಗಳು..

ಬೆಂಗಳೂರು: ರಾಜ್ಯವನ್ನು ವ್ಯಾಜ್ಯಮುಕ್ತವನ್ನಾಗಿ ಮಾಡುವುದು ಮತ್ತು ಮನೆ ಬಾಗಿಲಿನಲ್ಲಿಯೇ ನ್ಯಾಯ ಒದಗಿಸುವ ಕಲ್ಪನೆಯೊಂದಿಗೆ ರಾಜ್ಯದಲ್ಲಿ ಹಳ್ಳಿ ಕೋರ್ಟ್ ಗಳು ಪ್ರಾರಂಬವಾಗಲಿವೆ.

ಹೌದು ರಾಜ್ಯದಲ್ಲಿ  ಇನ್ನೆರಡು ತಿಂಗಳಲ್ಲಿ ಗ್ರಾಮ ನ್ಯಾಯಾಲಯಗಳನ್ನು ಸರ್ಕಾರ ಆರಂಭಿಸುತ್ತಿದೆ. ಗ್ರಾಮೀಣ ಭಾಗದ ಜನರು ತಾಲೂಕು ಮತ್ತು ಜಿಲ್ಲಾ ನ್ಯಾಯಾಲಯಗಳಿಗೆ  ವರ್ಷಾನುಗಟ್ಟಲೆ ಅಲೆದಾಡಬೇಕಾದ ಸ್ಥಿತಿ ಇದೆ. ಹೀಗಾಗಿ ಬಡವರ ಪಾಲಿಗೆ ನ್ಯಾಯದಾನ ದುಬಾರಿಯಾಗುತ್ತಿದೆ.

ಆದ್ದರಿಂದ ಯಾವುದೇ ನಾಗರಿಕರಿಗೆ ನ್ಯಾಯ ನಿರಾಕರಣೆಯಾಗದೇ ಕೆಳಹಂತದಲ್ಲಿಯೇ ನ್ಯಾಯಾಲಯಗಳು ಇರಬೇಕು ಎಂಬುದು ಹಳ್ಳಿ ಕೋರ್ಟ್ಗಳ ಸ್ಥಾಪನೆಯ ಉದ್ದೇಶವಾಗಿದೆ.  ರೈತರು, ಕೂಲಿ ಕಾರ್ವಿುಕರು ಹಣ ವೆಚ್ಚ ಮಾಡಿಕೊಂಡು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೆ ಅಲೆದಾಡುವುದನ್ನು ತಪ್ಪಿಸಬೇಕು ಎಂಬುದು ಇದರ ಉದ್ದೇಶವಾಗಿದೆ.

ಕೇಂದ್ರ ಸರ್ಕಾರ 2008ರಲ್ಲಿ ಗ್ರಾಮ ನ್ಯಾಯಾಲಯ ಕಾಯ್ದೆ ರೂಪಿಸಿತು. ಕೆಲ ರಾಜ್ಯಗಳಲ್ಲಿ ಸ್ಥಾಪನೆಯೂ ಆದವು. ಇತ್ತೀಚೆಗೆ ಕೇಂದ್ರ ಸರ್ಕಾರ ಮತ್ತೆ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ರಾಜ್ಯಗಳಿಗೆ ಸೂಚಿಸಿದೆ. ಅದರಂತೆ, ರಾಜ್ಯ ಸರ್ಕಾರ ಸಿದ್ಧತೆ ಆರಂಭಿಸಿದೆ.

ಈ ಸಂಬಂಧ ಕಾನೂನು ಸಚಿವ ಎಚ್.ಕೆ. ಪಾಟೀಲ್  ಈ ಬಗ್ಗೆ ಸಾಕಷ್ಟು ಸಭೆಗಳನ್ನು ನಡೆಸಿದ್ದಾರೆ.

ರಾಜ್ಯ ಸರ್ಕಾರ ಹೈಕೋರ್ಟ್ ಜತೆ ಚರ್ಚೆ ನಡೆಸಿ ಗ್ರಾಮ ನ್ಯಾಯಾಲಯಗಳಿಗೆ ನ್ಯಾಯಾಧೀಶರನ್ನು ನೇಮಕ ಮಾಡಬೇಕಾಗುತ್ತದೆ. ಪ್ರಥಮ ದರ್ಜೆ ನ್ಯಾಯಾಧೀಶರಿಗೆ ಸಮಾನವಾದ ವೇತನ ಶ್ರೇಣಿಯನ್ನು ನೀಡಲಾಗುತ್ತದೆ.

ಗ್ರಾಮ ನ್ಯಾಯಾಲಯಗಳಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ವಿಲೇವಾರಿ ಮಾಡಲಾಗುತ್ತದೆ. ಲೋಕ ಅದಾಲತ್ಗಳು ನಡೆಯುತ್ತಿರುತ್ತವೆ. ಆದರೆ, ಗ್ರಾಮೀಣ ಭಾಗದಲ್ಲಿ ತುರ್ತು ವಿಚಾರಣೆ ಮಾಡಿ ವಿಲೇವಾರಿ ಮಾಡಬೇಕು ಎಂಬುದು ಈ ಕಾಯ್ದೆಯ ಆಶಯ. ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಇರುವ ಪ್ರಕರಣಗಳನ್ನು ಗ್ರಾಮ ನ್ಯಾಯಾಲಯಗಳಿಗೆ ವರ್ಗಾವಣೆ ಮಾಡಿ ಅಲ್ಲಿ ವಿಲೇವಾರಿ ಮಾಡಬೇಕು. ಗ್ರಾಮ ಮಟ್ಟದಲ್ಲಿಯೇ ವಿಲೇವಾರಿ ಆದರೆ ಅಲೆದಾಡುವುದು ತಪುತ್ತದೆ. ಗ್ರಾಮ ಭಾಗದಲ್ಲಿ ಕ್ರಿಮಿನಲ್ ಪ್ರಕರಣಗಳಿಗಿಂತ ಸಿವಿಲ್ ವ್ಯಾಜ್ಯಗಳ ಸಂಖ್ಯೆ ಹೆಚ್ಚಿರುತ್ತದೆ. ಸಹೋದರರು, ಸಂಬಂಧಿಗಳ ನಡುವಿನ ಪ್ರಕರಣಗಳೇ ಜಾಸ್ತಿ ಇರುತ್ತವೆ. ಅವುಗಳ ವಿಲೇವಾರಿ ಬೇಗ ಆಗುತ್ತದೆ. ಸ್ಥಳೀಯವಾಗಿ ಪೊಲೀಸರು ಗ್ರಾಮ ನ್ಯಾಯಾಲಯಗಳಿಗೆ ಬೇಕಾದ ಎಲ್ಲ ರೀತಿಯ ನೆರವನ್ನು ನೀಡಬೇಕಾಗುತ್ತದೆ.

ಕಾಯ್ದೆಯ ಪ್ರಕಾರ ರಾಜ್ಯದಲ್ಲಿ ಒಂದು ಸಾವಿರ ಗ್ರಾಮ ನ್ಯಾಯಾಲಯಗಳ ಸ್ಥಾಪನೆಯಾಗಬೇಕಾಗಿತ್ತು. ಸದ್ಯಕ್ಕೆ 400 ಕೋರ್ಟ್ಗಳನ್ನು ಸ್ಥಾಪಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಪ್ರತಿ ನ್ಯಾಯಾಲಯ ಸ್ಥಾಪನೆಗೆ 20 ಲಕ್ಷ ರೂ. ವೆಚ್ಚವಾಗುತ್ತದೆ ಎಂಬ ಅಂದಾಜಿದೆ. ವಾರ್ಷಿಕ 18 ಲಕ್ಷ ರೂ. ವೆಚ್ಚವಾಗುತ್ತದೆ ಎಂದು ಹೇಳಲಾಗುತ್ತಿದೆ. ಎಲ್ಲಿ ಹೆಚ್ಚಿನ ಪ್ರಕರಣಗಳಿವೆಯೋ ಅಂತಹ ಸ್ಥಳಗಳನ್ನು ಗುರುತಿಸಿ ಅಲ್ಲಿ ಗ್ರಾಮ ನ್ಯಾಯಾಲಯಗಳು ಸ್ಥಾಪನೆಯಾಗಲಿವೆ.

ನೇಮಕಾತಿ ಪ್ರಕ್ರಿಯೆ: ನ್ಯಾಯಾಧೀಶರಿಂದ ಹಿಡಿದು ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಒಂದು ನ್ಯಾಯಾಲಯಕ್ಕೆ ಕನಿಷ್ಠ ಐದರಿಂದ ಆರು ಜನರಂತೆ ನೇಮಕವಾದರೂ ಎರಡರಿಂದ ಎರಡೂವರೆ ಸಾವಿರ ಜನರ ನೇಮಕವಾಗಬಹುದೆಂದು ಹೇಳಲಾಗುತ್ತಿದೆ.

ಈ ಕುರಿತು ಮಾತನಾಡಿರುವ ಕಾನೂನು ಸಚಿವ ಹೆಚ್.ಕೆ ಪಾಟೀಲ್, ತ್ವರಿತ ನ್ಯಾಯದಾನಕ್ಕಾಗಿ ಗ್ರಾಮ ಮಟ್ಟದಲ್ಲಿಯೇ ನ್ಯಾಯಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಎಲ್ಲ ಪ್ರಕ್ರಿಯೆಗಳನ್ನು ಶೀಘ್ರ ಪೂರ್ಣಗೊಳಿಸಲಾಗುತ್ತದೆ. ನೇಮಕಾತಿಗೆ ಹೈಕೋರ್ಟ್ ಜತೆ ರ್ಚಚಿಸ ಬೇಕಾಗುತ್ತದೆ. ನ್ಯಾಯಾಧೀಶರು, ವಕೀಲರ ನೇಮಕವಾಗಬೇಕಿದ್ದು, ಸದ್ಯದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಆಗಲಿದೆ ಎಂದು ಹೇಳಿದ್ದಾರೆ.

 

Related posts

ಡಿಕೆಶಿ ವಿರುದ್ಧ ಕುತಂತ್ರ- ಬಂಡೆಯನ್ನು ಅಲ್ಲಾಡಿಸಲು ಬಿಜೆಪಿಯಿಂದ ಅಸಾಧ್ಯ: ಆರ್. ಮೋಹನ್ ಕಿಡಿ

ಇಂದು ಕಾಂಗ್ರೆಸ್ ಸೇರಲಿದ್ದಾರೆ ಶಿವಮೊಗ್ಗದ  ಜೆಡಿಎಸ್ ಮತ್ತು ಬಿಜೆಪಿ ಮುಖಂಡರು.

ಪಿಹೆಚ್‍ಡಿ ಪಡೆದ ಆರ್.ಎಸ್.ವರುಣ್‍ಕುಮಾರ್ ಗೌರವ ಸನ್ಮಾನ.