ಕನ್ನಡಿಗರ ಪ್ರಜಾನುಡಿ
ಚಿಕ್ಕಮಗಳೂರುಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳು

ಆನೆಗಳ ಹಾವಳಿ ತಡೆಗೆ ರೈಲ್ವೆ ಕಂಬಿ ಆಳವಡಿಸಲು ಕ್ರಮ ವಹಿಸಿ-ಸಚಿವ ಕೆ.ಜೆ. ಜಾರ್ಜ್ ಸೂಚನೆ.

ಚಿಕ್ಕಮಗಳೂರು: ಆನೆಗಳು ಕಾಡಿನಿಂದ ಬಾರದಂತೆ ತಡೆಯಲು ರೈಲ್ವೆ ಕಂಬಿಗಳನ್ನು ಸಮಸ್ಯೆ ಇರುವ ಭಾಗದಲ್ಲಿ ಆಳವಡಿಸಲು ಕ್ರಮವಹಿಸುವಂತೆ ಇಂಧನ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಮೂಡಿಗೆರೆ ತಾಲ್ಲೂಕು ಪಂಚಾಯಿತಿಯ ದೀನ್ ದಯಾಳ್ ಉಪಾಧ್ಯಾಯ ಸಭಾ ಭವನದಲ್ಲಿ ಇಂದು ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೊರ ದೇಶದಲ್ಲಿ ಆನೆಗಳ ಹಾವಳಿಗಳಿಗೆ ರೈಲು ಕಂಬಿಗಳನ್ನು ಆಳವಡಿಸಲಾಗಿದೆ. ಇಲ್ಲೂ ಕೂಡ ಎಲ್ಲೆಲ್ಲಿ ಕಾಡಿನಿಂದ ಆನೆಗಳು ಹೊರಗೆ ಬರುವ ಸ್ಥಳಗಳಲ್ಲಿ ರೈಲು ಕಂಬಿಗಳಲ್ಲಿ ಆಳವಡಿಸಲು ಬೇಕಾಗುವ ಅನುದಾನದ ಮಾಹಿತಿಯನ್ನು ನೀಡುವಂತೆ ತಿಳಿಸಿದ ಅವರು ಮುಖ್ಯವಾಗಿ ಆನೆಗಳು ಆಹಾರವನ್ನು ಅರಸಿ ಕಾಡಿನಿಂದ ಹೊರಗೆ ಬರುತ್ತವೆ. ಆನೆಗಳಿಗೆ ಬೇಕಾಗುವ ಬಿದಿರು, ಹಲಸು, ಬಾಳೆ ಮುಂತಾದವುಗಳನ್ನು ಕಾಡಿನಲ್ಲಿ ಹೆಚ್ಚು ಬೆಳೆಯಲು ಆದ್ಯತೆ ನೀಡಬೇಕಲ್ಲದೆ ನೀರಿನ ವ್ಯವಸ್ಥೆ ಮಾಡುವಂತೆ ತಿಳಿಸಿದರು.
ಚಿಕ್ಕಮಗಳೂರು ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು ಸಭೆಗೆ ಮಾಹಿತಿ ನೀಡಿ ಆನೆಗಳ ಹಾವಳಿ ತಡೆಯಲು ಅರಣ್ಯ ಇಲಾಖೆಯಲ್ಲಿ ಇಟಿಎಫ್ ತಂಡ ಕೆಲಸ ಮಾಡುತ್ತಿದೆಯಲ್ಲದೆ. ಡಿಸಿಎಫ್ ನೇತೃತ್ವದಲ್ಲಿ ವಿಶೇಷ ತಂಡ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಮೂಡಿಗೆರೆ ವ್ಯಾಪ್ತಿಯಲ್ಲಿ ಆನೆಗಳು ಹೊರಗೆ ಬರುವ ಪ್ರದೇಶಗಳಲ್ಲಿ ೪೪ ಕಿ.ಮೀ. ಟ್ರಂಚ್ ಆಳವಡಿಸಲಾಗಿದೆ ಎಂದರು. ಟ್ರಂಚ್ ಮಳೆಗಾಲದಲ್ಲಿ ಮಣ್ಣು ತುಂಬುವುದರಿಂದ ಆನೆಗಳು ಹೊರಗೆ ಬರುತ್ತವೆ. ಆದ್ದರಿಂದ ರೈಲು ಕಂಬಿ ಆಳವಡಿಸಿದರೆ ಸಮಸ್ಯೆ ಬಗೆಹರಿಯುತ್ತದೆ ಎಂದು ಸಚಿವರು ತಿಳಿಸಿದರು.
ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ೪೯ ಗ್ರಾಮ ಪಂಚಾಯಿತಿಗಳಲ್ಲೂ ಸ್ಮಶಾನಕ್ಕೆ ಭೂಮಿ ನೀಡುವಂತೆ ತಿಳಿಸಿದ ಅವರು ಸರ್ಕಾರಿ ಭೂಮಿ ಲಭ್ಯವಿಲ್ಲದ ಕಡೆ ಖಾಸಗಿ ಭೂಮಿ ಖರೀದಿಸಿ ಸ್ಮಶಾನಕ್ಕೆ ಭೂಮಿ ನೀಡಲು ಕ್ರಮವಹಿಸುವಂತೆ ಹೇಳಿದರು. ಜಿಲ್ಲಾಧಿಕಾರಿಗಳು ಮಾತನಾಡಿ ೪೯ ಗ್ರಾಮ ಪಂಚಾಯಿತಿಗಳು ಸ್ಮಶಾನಕ್ಕೆ ಲಭ್ಯತೆ ಇರುವ ಕಡೆ ಭೂಮಿ ಗುರುತಿಸಿ ನೀಡಲಾಗಿದೆ. ೪೯ ಗ್ರಾಮ ಪಂಚಾಯಿತಿಗಳ ಪೈಕಿ ೨೧ ಗ್ರಾಮ ಪಂಚಾಯಿತಿಗಳಲ್ಲಿ ಎಲ್ಲೆಲ್ಲಿ ಒತ್ತುವರಿ ಮಾಡಲಾಗಿತ್ತು. ಅಂತಹ ಗ್ರಾಮಗಳಲ್ಲಿ ಒತ್ತುವರಿ ತೆರವುಗೊಳಿಸಿ ಸರಿಪಡಿಸಿ ಕೊಡಲಾಗಿದೆ ಎಂದರು.
ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮೂಡಿಗೆರೆ ತಾಲ್ಲೂಕಿನಲ್ಲಿ ೨೮೪೯, ೭೨೬ ಹಾಗೂ ಚಿಕ್ಕಮಗಳೂರು ೨೨೮೫ ನಿವೇಶನ ರಹಿತರಿದ್ದು, ಅವರಿಗೆ ಮನೆಗಳನ್ನು ಒದಗಿಸಿಕೊಳ್ಳಲು ಸೂಕ್ತ ನಿವೇಶನಗಳನ್ನು ಒದಗಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಚಿಕ್ಕಮಗಳೂರು ಉಪವಿಭಾಗದ ಉಪವಿಭಾಗಾಧಿಕಾರಿ ರಾಜೇಶ್ ಸಭೆಗೆ ಮಾಹಿತಿ ನೀಡಿ ಮೂಡಿಗೆರೆ ಮತ್ತು ಕಳಸದಲ್ಲಿ ೧೫೦ ಎಕರೆ, ಚಿಕ್ಕಮಗಳೂರು ೧೦೪ ಎಕರೆ ಜಮೀನಿನ ಅವಶ್ಯಕತೆ ಇದ್ದು, ಜಮೀನು ಮಂಜೂರಾತಿಗೆ ತಹಸೀಲ್ದಾರರಿಗೆ ಗಡಿ ಗುರುತು ಮಾಡಲು ಕಡತ ಕಳುಹಿಸಲಾಗಿದೆ. ಶೀಘ್ರ ಕ್ರಮ ವಹಿಸಲಾಗುವುದು ಎಂದರು.
ಚಿಕ್ಕಮಗಳೂರು ತಾಲ್ಲೂಕು ಸತ್ತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಪ್ತಶೆಟ್ಟಿಹಳ್ಳಿ, ಹಾಗೂ ವಸ್ತಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರಿಕಟ್ಟೆ ಗ್ರಾಮಗಳಲ್ಲಿ ಮನೆಗಳಿಗೆ ಹಕ್ಕು ಪತ್ರ ನೀಡಲು ಇರುವ ಸಮಸ್ಯೆಗಳನ್ನು ಕಂದಾಯ, ಅರಣ್ಯ ಮತ್ತು ಆರ್ ಡಿ ಪಿ ಆರ್ ಇಲಾಖೆಗಳ ಅಧಿಕಾರಿಗಳು ಸಭೆ ನಡೆಸಿ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಿ ಹಕ್ಕು ಪತ್ರ ನೀಡಲು ಕ್ರಮ ವಹಿಸುವಂತೆ ತಿಳಿಸಿದರು.
ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಕ್ರಮ ವಹಿಸುವಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದ ಅವರು ತಾಲ್ಲೂಕಿನ ವಿದ್ಯುತ್ ಸಮಸ್ಯೆ ಪರಿಹರಿಸಲು ಜನ್ನಾಪುರ, ಹಾಂದಿಗಳಲ್ಲಿ ವಿದ್ಯುತ್ ಉಪಕೇಂದ್ರಗಳನ್ನು ತೆರೆಯಲು ಮಾಹಿತಿ ಸಿದ್ಧಪಡಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಗೆ ಹಾಜರಾಗುವಾಗ ಅಧಿಕಾರಿಗಳು ಸೂಕ್ತ ಮಾಹಿತಿಯೊಂದಿಗೆ ಹಾಜರಾಗಬೇಕು, ಚಿಕ್ಕ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲಿಯೇ ಬಗೆಹರಿಸಲು ಕ್ರಮ ವಹಿಸಬೇಕಲ್ಲದೆ ಅಧಿಕಾರಿಗಳು ಕಛೇರಿಯಿಂದ ಜನರ ಬಳಿಗೆ ಹೋಗಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಬೇಕು, ಸರ್ಕಾರ ನೀಡುವ ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದರು.
ಸಭೆಯಲ್ಲಿ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ನಯನ ಮೋಟಮ್ಮ , ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗೋಪಾಲಕೃಷ್ಣ, ಮೂಡಿಗೆರೆ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಡಾ. ರಮೇಶ್ ಹಾಗೂ ಜಿಲ್ಲಾ ಹಾಗೂ ಮೂಡಿಗೆರೆ ತಾಲ್ಲೂಕಿನ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Related posts

ಇತ್ತ ಗ್ಯಾಸ್ ಬೆಲೆ ಇಳಿಕೆ ಬೆನ್ನಲ್ಲೆ ಅತ್ತ ಶೀಘ್ರದಲ್ಲೇ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ?

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಶಿ.ಜು.ಪಾಶ ನೇಮಕ.

ಭದ್ರಾ ಜಲಾಶಯದಿಂದ ನಾಲೆಗಳಿಗೆ ನಿರಂತರವಾಗಿ ನೀರು ಹರಿಸದಂತೆ ಆಗ್ರಹಿಸಿ ರೈತರ ಪ್ರತಿಭಟನೆ.