ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಮತ್ತೆ 15ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಮುಂದಾದ ಸರ್ಕಾರ.

ಬೆಂಗಳೂರು:  ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪೊಲೀಸ್ , ಶಿಕ್ಷಣ ಇಲಾಖೆ ಸೇರಿ ಎಲ್ಲಾ ಇಲಾಖೆಗಳಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದ್ದು ಈ ನಡುವೆ ಶಿಕ್ಷಕರ ವರ್ಗಾವಣೆ ಪೂರ್ಣಗೊಂಡಿದ್ದು ಮತ್ತೆ15ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ  ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.

ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ-2020) ತಿದ್ದುಪಡಿ ಕಾಯ್ದೆಯ ಜಾರಿಯ ನಂತರ ಮೊದಲ ಬಾರಿ ನಡೆದ ವರ್ಗಾವಣೆಯ ಪ್ರಯೋಜನವನ್ನು ರಾಜ್ಯದ ಸರ್ಕಾರಿ ಶಾಲೆಗಳ 30,629 ಶಿಕ್ಷಕರು ಪಡೆದಿದ್ದಾರೆ. ವರ್ಗಾವಣೆಯಿಂದ ತೆರವಾಗುವ ಸ್ಥಾನಕ್ಕೆ ಮತ್ತೆ 15 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಅನುಮತಿ ಕೋರಿ ಶಾಲಾ ಶಿಕ್ಷಣ ಇಲಾಖೆ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಿದೆ.

ಇದೇ ಶೈಕ್ಷಣಿಕ ವರ್ಷದ ಆರಂಭದಲ್ಲಿ 35 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿತ್ತು. ಹೊಸ ಸ್ಥಳಗಳಿಗೆ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗುವ ಪ್ರಕ್ರಿಯೆ ಪೂರ್ಣಗೊಂಡರೆ ಉತ್ತರ ಕರ್ನಾಟಕ, ಮಲೆನಾಡು ಭಾಗದ ಶಾಲೆಗಳಲ್ಲಿ ಅಧಿಕ ಪ್ರಮಾಣದಲ್ಲಿ ಶಿಕ್ಷಕರ ಕೊರತೆಯಾಗಲಿದೆ. ಹೀಗಾಗಿ, ಮತ್ತೆ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ.

ಈ ಹಿಂದೆ ಪರಸ್ಪರ ವರ್ಗಾವಣೆಗೆ ಒಂದು ಬಾರಿ ಮಾತ್ರ  ಅವಕಾಶ ಇತ್ತು. ಕೆಲಸಕ್ಕೆ ಸೇರಿದ ಮೊದಲ ಐದು ವರ್ಷ ಹಾಗೂ ನಿವೃತ್ತಿಗೆ ಮೊದಲಿನ ಐದು ವರ್ಷಗಳು ವರ್ಗಾವಣೆಗೆ ಅವಕಾಶ ಇರುವುದಿಲ್ಲ. ಒಮ್ಮೆ ವರ್ಗಾವಣೆಯಾದವರು ಮೂರು ವರ್ಷಗಳ ನಂತರ ಮತ್ತೆ ವರ್ಗಾವಣೆಗೆ ಕೋರಿಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ, 73 ಸಾವಿರ ಶಿಕ್ಷಕರು ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದರು.

ಪ್ರಾಥಮಿಕ ಶಾಲೆಯ 23,747 ಹಾಗೂ ಪ್ರೌಢಶಾಲೆಗಳ 6,882 ಶಿಕ್ಷಕರು ಕೌನ್ಸೆಲಿಂಗ್ ಮೂಲಕ ಸ್ಥಳ ಆಯ್ಕೆ ಮಾಡಿಕೊಂಡಿದ್ದಾರೆ. ವರ್ಗಾವಣೆಯಾದವರು ಕೆಲ ಜಿಲ್ಲೆಗಳಲ್ಲಿ ತಾವು ಆಯ್ಕೆಮಾಡಿಕೊಂಡ ಶಾಲೆಗಳಿಗೆ ತೆರಳಿ ಕರ್ತವ್ಯಕ್ಕೆ ಈಗಾಗಲೇ ಹಾಜರಾಗಿದ್ದಾರೆ. ಕೆಲ ಜಿಲ್ಲೆಗಳ ಶಾಲೆಗಳಲ್ಲಿ ವರ್ಗಾವಣೆಯಾದವರನ್ನು ಕಳುಹಿಸಿದರೆ ಕಾಯಂ ಶಿಕ್ಷಕರು ಇಲ್ಲದಂತಾಗುತ್ತದೆ. ಅಂತಹ ಶಾಲೆಗಳಲ್ಲಿ ಬದಲಿ ವ್ಯವಸ್ಥೆ ಮಾಡುವವರಿಗೆ ಕರ್ತವ್ಯದಿಂದ ಬಿಡುಗಡೆ ಮಾಡದಂತೆ ಶಿಕ್ಷಣ ಇಲಾಖೆ ಸೂಚಿಸಿದೆ.

 

Related posts

ರಾಜ್ಯದಲ್ಲಿ ವಿದ್ಯುತ್ ಕೊರತೆ, ಲೋಡ್ ಶೆಡ್ಡಿಂಗ್: ಖಾಸಗಿಯವರು ಬೇರೆ ರಾಜ್ಯಕ್ಕೆ ವಿದ್ಯುತ್ ಮಾರುವುದಕ್ಕೆ ಬ್ರೇಕ್

 ನಮ್ಮ ರೈತರ ಹಿತ ಕಾಪಾಡುವ ಕೆಲಸ ನಮ್ಮದು- ಡಿಸಿಎಂ ಡಿ.ಕೆ ಶಿವಕುಮಾರ್.

ಭಯೋತ್ಪಾದನೆಗೆ ಸಂಬಂಧಿಸಿದ ವ್ಯಕ್ತಿಗಳಿಗೆ ವೇದಿಕೆ ಕೊಡಬೇಡಿ- ಟಿವಿ ಚಾನೆಲ್ ಗಳಿಗೆ ಕೇಂದ್ರ ಸರ್ಕಾರ ಸೂಚನೆ.