ಕನ್ನಡಿಗರ ಪ್ರಜಾನುಡಿ
ಚಿಕ್ಕಮಗಳೂರುಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳು

ಪ್ರವಚನದಿಂದ ಸಂಸ್ಕಾರದ ಬೆಳವಣಿಗೆ:ಶಾಸಕ ತಮ್ಮಯ್ಯ

ಚಿಕ್ಕಮಗಳೂರು : ಸಾಹಿತ್ಯ ಮತ್ತು ಸಂಸ್ಕøತಿಯ ಪ್ರವಚನದಿಂದ ಸಂಸ್ಕಾರದ ಬೆಳವಣಿಗೆ ಸಾಧ್ಯ ಎಂದು ಶಾಸಕ ಎಚ್.ಡಿ.ತಮ್ಮಯ್ಯ ನುಡಿದರು.
ಮಾಧ್ಯಮ ಸಂಸ್ಕøತಿ ಪ್ರತಿಷ್ಠಾನ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಸಹಯೋಗದೊಂದಿಗೆ ಶ್ರಾವಣಮಾಸದ ಪ್ರವಚನ ಮಾಲಿಕೆ ‘ಮುತ್ತಿನಂತ ಮಾತು ಅಭಿಯಾನ’ವನ್ನು ಇಂದು ಸಂಜೆ ಬಸವನಹಳ್ಳಿ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಸತ್ವಪೂರ್ಣ ಮಾತುಗಳು ಸಮಾಜಮುಖಿ ಕಾರ್ಯಗಳಿಗೆ ಪ್ರೇರಕ. 12ನೆಯ ಶತಮಾನದಲ್ಲಿ ಬಸವಾದಿ ಶರಣರು ವಚನಗಳ ಮೂಲಕ ಸಮಾಜ ಪರಿವರ್ತನೆಗೆ ಶ್ರಮಿಸಿದವರು. ಅಂದಿನ ಅವರ ಮಾತುಗಳು ಇಂದಿಗೂ ಪ್ರಸ್ತುತ. ‘ಕಾಯಕವೇ ಕೈಲಾಸ’ ಎಂಬುದು ಸಾರ್ವಕಾಲೀಕ ಮೌಲ್ಯದ ನುಡಿ ಎಂದ ಶಾಸಕ ತಮ್ಮಯ್ಯ, ಸಮಾಜದಲ್ಲಿ ಸಂಸ್ಕಾರವನ್ನು ಬಿತ್ತುವ ಸದುದ್ದೇಶದಿಂದ ಮುತ್ತಿನನಂತ ಮಾತು ಅಭಿಯಾನ ನಡೆಯುತ್ತಿದೆ ಎಂದರು.
ನಮ್ಮ ಮಾತು ಮತ್ತು ಗುರಿ ಉತ್ತಮವಾಗಿರಬೇಕು. ಸಕಾರಾತ್ಮಕವಾಗಿರಬೇಕು. ಸದುದ್ದೇಶದಿಂದ ಕೂಡಿರಬೇಕು. ಹಿರಿದಾದ ಕನಸು ಕಾಣಬೇಕೆಂದು ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು. ಕಂಡ ಕನಸನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಸತತ ಪ್ರಯತ್ನವಿರಬೇಕೆಂದು ಅಬ್ದುಲ್‍ಕಲಾಂ ಹೇಳಿದ್ದರು. ಪೈಲಟ್ ಆಗುವ ಆಸೆ ಹೊಂದಿದ್ದ ಕಲಾಂ ಎತ್ತರ ಕಡಿಮೆ ಎಂಬ ಕಾರಣಕ್ಕಾಗಿ ಪ್ರವೇಶ ಪರೀಕ್ಷೆಯಲ್ಲಿ ತಿರಸ್ಕುತಗೊಂಡಿದ್ದರೂ ಮುಂದೆ ಸತತ ಪ್ರಯತ್ನದಿಂದಾಗಿ ದೊಡ್ಡ ವಿಜ್ಞಾನಿಯಾಗಿ ನೂರಾರು ಪೈಲೆಟ್‍ಗಳನ್ನು ಸೃಷ್ಟಿಸುವ ಸಾಮಥ್ರ್ಯ ಪಡೆದುಕೊಂಡರೆಂದು ಉದಾಹರಿಸಿದರು.
‘ಮಾತೆಂಬುದು ಜ್ಯೋತಿರ್ಲಿಂಗ’ ಪ್ರಥಮ ಉಪನ್ಯಾಸ ನೀಡಿದ ಜನಪರಚಿಂತಕ, ವಾಗ್ಮಿ, ಸಾಹಿತಿ ಚಟ್ನಳ್ಳಿಮಹೇಶ್ ನಮ್ಮೆಲ್ಲ ಮನೆ ಮತ್ತು ಶಿಕ್ಷಣ ಸಂಸ್ಥೆಗಳು ಮಾತು ಕಲಿಸುವ ಪ್ರಯೋಗ ಶಾಲೆಗಳಾಗಬೇಕು. ಸದ್ಭಾವದ ಬೀಜ ಬಿತ್ತಲು ಈ ಅಭಿಯಾನ. ಮಾತಿನ ಮಾಲಿನ್ಯ ತಡೆಗಟ್ಟಬೇಕು. ಭವ್ಯ-ದಿವ್ಯ ಮಾತುಗಳಿಂದ ಜೀವನದ ಸಾರ್ಥಕತೆ ಎಂದರು.
12ನೆಯ ಶತಮಾನದಲ್ಲಿ ಶರಣರು ಕಟ್ಟಿದ ಅನುಭವ ಮಂಟಪದ ಅಧ್ಯಕ್ಷರಾಗಿದ್ದ ಅಲ್ಲಮಪ್ರಭು ‘ಮಾತೆಂಬುದು ಜ್ಯೋತಿರ್ಲಿಂಗ’ವೆಂದು ನುಡಿದಿದ್ದರು. ಧ್ವನಿಬತ್ತಿದ ಸಮೂಹಕ್ಕೆ ಅಂದು ಮಾತನಾಡಲು ಪ್ರೇರೇಪಿಸಿ ದಂದಣ ದತ್ತಣ ಎಂದಾದರೂ ಮಾತನಾಡಬೇಕೆಂದು ಸ್ಫೂರ್ತಿ ನೀಡಲಾಯಿತು. ಮಾತಿನ ಬಗ್ಗೆ ನೂರಾರು ವಚನಗಳು ಅಂದಿನಿಂದಲೂ ಸೃಷ್ಟಿಯಾಗುತ್ತಿವೆ.
ಆಧುನಿಕ ಕವಿ ಚನ್ನವೀರಕಣವಿ ಅವರು ನಾವಾಡುವ ಮಾತು ಮೃದು ಮಧುರವಾಗಿ ಹಾರದಂತಿರಲಿ, ಚೂರಿಯಂತಲ್ಲ ಎಂದಿದ್ದಾರೆ. ಆಡುವ ಮಾತು ಮನಸ್ಸನ್ನು ಅರಳಿಸಬೇಕೆ ಹೊರತು ಕೆರಳಿಸಬಾರದು. ಮುತ್ತಿನಂತ ಮಾತು ಹಿತವಾಗಿರುತ್ತದೆ. ನಲ್ನುಡಿ ಕಿವಿಯಮೇಲೆ ಬಿದ್ದರೆ ಸಂತೋಷ-ಆನಂದ ಹೊಮ್ಮಬೇಕು.
ನುಡಿದರೆ ಮುತ್ತಿನ ಹಾರದಂತಿರಬೇಕೆಂದು ಹೇಳುವುದರ ಜೊತೆಗೆ ನಡೆ-ನುಡಿ ಸಮನ್ವಯ ಸಿದ್ಧಾಂತ ಮಾತಿನಲ್ಲಿರಬೇಕು. ಸತ್ಯ ಮತ್ತು ಸತ್ವ ಹಿಡಿದಿರುವ ನುಡಿಪ್ರಜ್ಞೆ ಮುಖ್ಯ. ಜನರಷ್ಟೆ ಅಲ್ಲ ಜನಾರ್ಧನನೂ ಮೆಚ್ಚುವಂತಿರಬೇಕು ಎಂದ ಚಟ್ನಳ್ಳಿಮಹೇಶ್, ಸುಭಾಷಿತದಂತಹ ಮಾತುಗಳು ಬದುಕಿಗೆ ಸ್ಫೂರ್ತಿ ಮತ್ತು ಪ್ರೇರಣೆ ಎಂದರು.
ಜನಪದರು ಮಾತಿನ ಮೌಲ್ಯವನ್ನು ಅನೇಕ ಹಾಡು-ಪದ್ಯ-ಪದಗಳಲ್ಲಿ ಸಾರಿದ್ದಾರೆ. ಅತ್ತೆ ಮನೆಯಲ್ಲಿ ಮುತ್ತಾಗಿರಬೇಕು, ಮಾತುಗಂಟಿ ಮಗಳಲ್ಲ-ತಾಟಗಿತ್ತಿ ಸೊಸೆಯಲ್ಲ. ಮಾತೇ ಮುತ್ತು-ಮಾತೇ ಮೃತ್ಯು. ಜಾಣನಿಗೆ ಮಾತಿನಪೆಟ್ಟು-ಕೋಣನಿಗೆ ದೊಣ್ಣೆಪೆಟ್ಟು ಎಂಬಿತ್ಯಾದಿ ಅಣಿಮುತ್ತುಗಳನ್ನು ಉಲ್ಲೇಖಿಸಿದ ಚಟ್ನಳ್ಳಿಮಹೇಶ್, ಮಾತಿನಲ್ಲಿ ಚೂಡಮಣಿ ಆಗಬೇಕು ಎಂದರೆ ಬೆಳಕಾಗಬೇಕೆ ಹೊರತು ಕೊಳಕಾಗಬಾರದೆಂಬ ಎಚ್ಚರಿಕೆ ಅಗತ್ಯ ಎಂದರು.
ವಿಮರ್ಶಕ ಸಾಹಿತಿ ಪ್ರಾಂಶುಪಾಲ ಸತ್ಯನಾರಾಯಣ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಮಾತಿನ ಪಾವಿತ್ರ್ಯತೆಯನ್ನು ಕಾಪಾಡುವುದು ನಮ್ಮೆಲ್ಲರ ಹೊಣೆಗಾರಿಕೆ. ಮಾತನ್ನು ಮುತ್ತು, ಚೂಡಾಮಣಿ, ವಜ್ರ ವೈಢೂರ್ಯಗಳಿಗೆ ಹೆಚ್ಚಾಗಿ ಸಮೀಕರಿಸಿರುವುದು ಕವಿತೆ ಸಾಹಿತ್ಯಗಳಲ್ಲಿ ಕಂಡುಬರುತ್ತದೆ. ಅವೆಲ್ಲವೂ ಪಾರದರ್ಶಕ ಎಂಬುದು ಗಮನೀಯ. ನಮ್ಮ ಮಾತು ನಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಮಾತಿನ ಘನತೆಯನ್ನು ಗೌರವವನ್ನು ನಾವೆಲ್ಲ ಹೆಚ್ಚಿಸುವುದರಲ್ಲಿ ಬದುಕಿನ ಸಾರ್ಥಕತೆ ಇದೆ ಎಂದರು.
ಮಾ.ಸಂ.ಪ್ರ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಪ್ರಾಸ್ತಾವಿಸಿ ಇಂದಿನಿಂದ ಸೆಪ್ಟಂಬರ್ 14ರವರೆಗೆ ಶ್ರಾವಣಮಾಸ ಪರ್ಯಂತ ‘ಮುತ್ತಿನಂತ ಮಾತು’ ಅಭಿಯಾನವನ್ನು ನಗರವನ್ನು ಕೇಂದ್ರಿಕರಿಸಿ ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗಿದೆ. ನಾಡಿನ ಹಿರಿಯ ಸಾಹಿತಿ ಚಟ್ನಳ್ಳಿಮಹೇಶ್ ಅವರು ‘ವಚನಸಾಹಿತ್ಯ’ದಲ್ಲಿ ಬರುವ ಸಮಾಜಮುಖಿ ಚಿಂತನೆಗಳನ್ನು ವೈವಿಧ್ಯಮಯವಾದ ಕ್ಷೇತ್ರಗಳಲ್ಲಿ ಸಾಹಿತ್ಯದ ಮಹತ್ವವನ್ನು ಸಾರುವ 33 ಉಪನ್ಯಾಸಗಳ ಮಾಲೆಯನ್ನು ಕಟ್ಟಿಕೊಡಲಿದ್ದಾರೆಂದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾಧ್ಯಕ್ಷ ಅರವಿಂದದೀಕ್ಷಿತ್ ಸ್ವಾಗತಿಸಿ, ಉಪನ್ಯಾಸಕರುಗಳಾದ ಮಂಜುನಾಥಭಟ್ ನಿರೂಪಿಸಿ, ಕಿರಣ್ ವಂದಿಸಿದರು. ಲೋಹಿತ್ ವಚನಗಾಯನ ಗಮನಸೆಳೆಯಿತು. ಪ್ರತಿಷ್ಠಾನದ ಸಂಚಾಲಕ ರುದ್ರೇಶ್‍ಕಡೂರು, ಉಪನ್ಯಾಸಕರುಗಳಾದ ದಯಾನಂದ, ಸುರೇಶ್ ಮತ್ತಿತರರು ಪಾಲ್ಗೊಂಡಿದ್ದರು.

Related posts

ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತಿನ ಹಣ ಬಿಡುಗಡೆ 

ಸ್ಕೀಲ್ ಅಕಾಡೆಮಿಗೆ ಸಚಿವರ ಸಕರಾತ್ಮಕ ಸ್ಪಂದನೆ.

ಕಜಾಪ ದಿಂದ ದಸರಾ ಜನಪದ ಗೀತೆಗಳ ವೃಂದಗಾಯನ ಸ್ಪರ್ಧೆಗೆ ಆಹ್ವಾನ