ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಸರ್ಕಾರದಿಂದ “ಪೆಹಲಾ ಓಟ್” ಅಭಿಯಾನಕ್ಕೆ ಚಾಲನೆ: ಏನಿದು ಪೆಹಲಾ ಓಟ್..?

ಬೆಂಗಳೂರು:  ಬರುವ 2024 ರ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಯುವ ಸಮೂಹವನ್ನು ಸೆಳೆಯಲು ರಾಜ್ಯಾದ್ಯಂತ “ಪೆಹಲಾ ಓಟ್” [ಮೊದಲ ಮತ] ಅಭಿಯಾನಕ್ಕೆ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಕಂದಾಯ ಸಚಿವ ಕೃಷ್ಣ ಭೈರೇಗೌಡ ಚಾಲನೆ ನೀಡಿದರು.

ಸಹಕಾರ ನಗರದ ತಮ್ಮ ಕಚೇರಿಯಲ್ಲಿ ರಾಜ್ಯದಲ್ಲಿ ಮೊದಲ ಮತದಾನ ಅಭಿಯಾನದ ಜವಾಬ್ದಾರಿ ಹೊತ್ತಿರುವ ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಎಐಸಿಸಿ ಸದಸ್ಯ ಎಂ.ಎಸ್. ರಕ್ಷಾ ರಾಮಯ್ಯ ಅವರ ಸಮ್ಮುಖದಲ್ಲಿ ಸಚಿವ ಕೃಷ್ಣಭೈರೇಗೌಡ ಪ್ರಚಾರ ವಾಹನಗಳಿಗೆ ಹಸಿರು ನಿಶಾನೆ ತೋರಿದರು. 18 ರಿಂದ 23 ವಯಸ್ಸಿನ ಮೊದಲ ಬಾರಿಗೆ ಲೋಕಸಭೆಯಲ್ಲಿ ಮತದಾನ ಮಾಡುತ್ತಿರುವವರನ್ನು ಸೆಳೆಯಲು ಈ ಅಭಿಯಾನ ಆಯೋಜಿಸಲಾಗಿದೆ.

ನಂತರ ಮಾತನಾಡಿದ ಎಂ.ಎಸ್.ರಕ್ಷಾ ರಾಮಯ್ಯ, ಯುವ ಸಮೂಹ ದೇಶದ ಯುವ ಶಕ್ತಿಯಾಗಿದ್ದು, ಮೊದಲ ಮತ ಅಭಿಯಾನ ಯುವ ಜನಾಂಗದ ಆಂದೋಲನವಾಗಲಿದೆ. ಅಭಿಯಾನದಲ್ಲಿ ಸಂವಾದ, ತಂತ್ರಜ್ಞಾನ ಆಧಾರಿತ ಪ್ರಚಾರ, ಕ್ಯೂ.ಆರ್. ಕೋಡ್ ಮೂಲಕ ಮತದಾರರ ಪಟ್ಟಿಗೆ ಹೆಸರು ನೋಂದಣಿ ಮಾಡಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಸರಕು ಸಾಗಾಣೆ ವಾಹನಗಳಲ್ಲಿ ಎಲ್.ಇ.ಡಿ ವ್ಯವಸ್ಥೆ, ಶಾಲಾ ಕಾಲೇಜುಗಳು, ಟ್ಯೂಷನ್ ತಾಣಗಳು, ಬಸ್ ನಿಲ್ದಾಣಗಳು, ಮಾಲ್ ಗಳಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಯೋಜಿಸಿದ್ದ ಯುವ ಮತ ಅಭಿಯಾನಕ್ಕೆ ಅಭೂಪೂರ್ವ ಸ್ಪಂದನೆ ದೊರೆತಿದ್ದು, ಕಾಂಗ್ರೆಸ್ ಪಕ್ಷ ಶೇ 42 ರಷ್ಟು ಯುವ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು.  ಬಿಜೆಪಿಯನ್ನು ಹಿಂದಿಕ್ಕಿ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು. ಈ ಸಫಲತೆಯ ನಂತರ ಇದೀಗ ಪೆಹಲಾ ಓಟ್ ಅಭಿಯಾನ ಆರಂಭಿಸಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮತಚಲಾಯಿಸುತ್ತಿರುವವರನ್ನು ಸೆಳೆಯುವ ಸವಾಲು ನಮ್ಮ ಮುಂದಿದ್ದು, ನಮಗೆ ಉತ್ತಮ ಬೆಂಬಲ ದೊರೆಯುವ ನಿರೀಕ್ಷೆಯಿದೆ. ಪ್ರಚಾರ ವಾಹನಗಳು ರಾಜ್ಯಾದ್ಯಂತ ಸಂಚರಿಸಲಿವೆ. ಮತದಾನದ ಮಹತ್ವದ ಬಗ್ಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಸಹ ಅರಿವು ಮೂಡಿಸಲಿದ್ದಾರೆ ಎಂದು ಹೇಳಿದರು.

 

Related posts

ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ: ರಾಜ್ಯದ 28 ಕ್ಷೇತ್ರಗಳಿಗೆ ಸಚಿವರನ್ನ ‘ವೀಕ್ಷಕ’ರಾಗಿ ನೇಮಿಸಿದ ಕಾಂಗ್ರೆಸ್: ದಕ್ಷಿಣ ಕನ್ನಡಕ್ಕೆ ಮಧು ಬಂಗಾರಪ್ಪ ನೇಮಕ.

44 ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ: ಎಲ್ಲೆಡೆ  ಭದ್ರತೆ ಒದಗಿಸಲು ಪೊಲೀಸರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ.

ವಿಶ್ವಕಪ್ ಫೈನಲ್ ನಲ್ಲಿ ಭಾರತ ತಂಡ ಗೆದ್ದು ಬರಲಿ: ಶುಭಹಾರೈಕೆ.