ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಆ.14ರೊಳಗೆ ರಾಜ್ಯದಲ್ಲಿ1300 ಅನಧಿಕೃತ ಶಾಲೆಗಳು ಬಂದ್.

ಬೆಂಗಳೂರು: ರಾಜ್ಯದಲ್ಲಿ ಅ. 14ರೊಳಗೆ 1300 ಅನಧಿಕೃತ ಶಾಲೆಗಳು ಬಂದ್ ಆಗಲಿವೆ.

ಹೌದು, ರಾಜ್ಯದಲ್ಲಿ ಬರೋಬ್ಬರಿ 1,300 ಅನಧಿಕೃತ ಶಾಲೆಗಳಿದ್ದರೂ ಅಗತ್ಯ ಕ್ರಮ ಕೈಗೊಳ್ಳದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರದಿ ಕೇಳಿದ ಬೆನ್ನಲ್ಲೇ ರಾಜ್ಯದಲ್ಲಿರುವ ಅನಧಿಕೃತ ಶಾಲೆಗಳನ್ನು ಗುರುತಿಸಿ ಆ.14ರ ಒಳಗಾಗಿ ನಿಯಮಾನುಸಾರ ಮುಚ್ಚಿಸಬೇಕು. ಜತೆಗೆ ಆಗಸ್ಟ್ 16 ಒಳಗಾಗಿ ದೃಢೀಕೃತ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಎಲ್ಲಾ ಜಿಲ್ಲಾ ಉಪ ನಿರ್ದೇಶಕರಿಗೆ ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.

ಈ ಬಗ್ಗೆ ಜ್ಞಾಪನಾ ಪತ್ರ ಹೊರಡಿಸಿರುವ ಅವರು, ‘ನೋಂದಣಿ, ಅನುಮತಿ ಪಡೆಯದೆ ನಡೆಸುತ್ತಿರುವ ಶಾಲೆಗಳನ್ನು ನಿಯಮಾನುಸಾರ ಮುಚ್ಚಬೇಕು. ಆ.14ರ ಒಳಗಾಗಿ ಮುಚ್ಚಿ ಪತ್ರಿಕಾ ಪ್ರಕಟಣೆ ನೀಡಬೇಕು. ಜತೆಗೆ ನೋಂದಣಿ ಇಲ್ಲದೆ ಅನಧಿಕೃತವಾಗಿ ಉನ್ನತೀಕರಿಸಿದ ತರಗತಿಗಳನ್ನು ಆ.14ರೊಳಗೆ ರದ್ದುಪಡಿಸಬೇಕು. ಜತೆಗೆ ರಾಜ್ಯ ಪಠ್ಯಕ್ರಮದಲ್ಲಿ ಬೋಧಿಸಲು ಅನುಮತಿ ಪಡೆದು ಅನಧಿಕೃತವಾಗಿ ಕೇಂದ್ರ ಪಠ್ಯದಲ್ಲಿ ಬೋಧಿಸುತ್ತಿರುವವರು, ಕೇಂದ್ರ ಪಠ್ಯಕ್ರಮಕ್ಕೆ ಸಂಯೋಜನೆ ಹೊಂದಿದ ಬಳಿಕವೂ ರಾಜ್ಯ ಪಠ್ಯಕ್ರಮ ಮುಂದುವರೆಸುತ್ತಿರುವವರಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಬೇಕು. ನೋಂದಣಿ ಪಡೆದ ಮಾಧ್ಯಮದಲ್ಲಿ ಬೋಧಿಸದೆ ಅನಧಿಕೃತವಾಗಿ ಬೇರೆ ಮಾಧ್ಯಮದಲ್ಲಿ ಬೋಧಿಸುತ್ತಿರುವ ಶಾಲೆಗಳು, ಅನಧಿಕೃತ ಪಠ್ಯ ಕ್ರಮ ಬೋಧಿಸುತ್ತಿರುವುದು, ಅನಧಿಕೃತವಾಗಿ ಹೆಚ್ಚುವರಿ ವಿಭಾಗಗಳನ್ನು ಹೊಂದಿರುವುದು ಸೇರಿದಂತೆ ಎಲ್ಲಾ ನಿಯಮ ಉಲ್ಲಂಘನೆಗಳ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಕಟ್ಟುನಿಟ್ಟಾಗಿ ತಿಳಿಸಿದ್ದಾರೆ.

ಅನಧಿಕೃತ ಶಾಲೆಗಳಿಗೆ ಏ.13 ರಿಂದ ಜೂ.20 ರವರೆಗೆ ನೋಟಿಸ್ ಅವಧಿ ನೀಡಲಾಗಿತ್ತು. ಜು.1 ರಂದು 45 ದಿನಗಳ ಕಾಲಾವಕಾಶ ನೀಡಿ ಬಳಿಕವೂ ನಿಯಮ ಉಲ್ಲಂಘನೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು. ಇದರ ನಡುವೆ ರಾಜ್ಯದಲ್ಲಿನ ಅನಧಿಕೃತ ಶಾಲೆಗಳಿಗೆ ಸಂಬಂಧಪಟ್ಟಂತಹ ಮಾಧ್ಯಮಗಳಲ್ಲಿ ರಾಜ್ಯದಲ್ಲಿ 1,300 ಕ್ಕೂ ಅನಧಿಕೃತ ಶಾಲೆಗಳಿದ್ದರೂ ಇಲಾಖೆ ಕ್ರಮವಹಿಸುವುದಿಲ್ಲ ಎಂದು ಪ್ರಕಟವಾಗಿದೆ. ಹೀಗಾಗಿ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಗಳು ಈ ಬಗ್ಗೆ ಅನುಪಾಲನಾ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ಹೀಗಾಗಿ ಈ ಬಗ್ಗೆ ಉದಾಸೀನತೆ ಹಾಗೂ ನಿರ್ಲಕ್ಷ್ಯತೆ ತೋರಬಾರದು. ಜಿಲ್ಲಾ ವ್ಯಾಪ್ತಿಯಲ್ಲಿ ಅನಧಿಕೃತ ಶಾಲೆಗಳ ಬಗ್ಗೆ ಕ್ರಮವಹಿಸಿರುವ ಹಾಗೂ ಬಳಿಕ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ಅನಧಿಕೃತ ಶಾಲೆ ಇರುವುದಿಲ್ಲವೆಂಬ ಬಗ್ಗೆ ರಾಜ್ಯ ಹಾಗೂ ಸ್ಥಳೀಯ ಪತ್ರಿಕೆಯಲ್ಲಿ ಪತ್ರಿಕಾ ಪ್ರಕಟಣೆ ನೀಡಬೇಕು.

ಈ ಕುರಿತ ಅನುಪಾಲನಾ ವರದಿ ದೃಡೀಕರಿಸಿ ಆ.16ರೊಳಗೆ ಕಚೇರಿಗೆ ಸಲ್ಲಿಸಬೇಕು. ಒಂದು ವೇಳೆ ನಿಗದಿತ ಅವಧಿಯೊಳಗೆ ಯಾವುದೇ ಮಾಹಿತಿ ಸಲ್ಲಿಸದಿದ್ದರೆ ಕರ್ತವ್ಯ ಲೋಪವೆಂದು ಭಾವಿಸಿ ಶಿಸ್ತು ಕ್ರಮವಹಿಸುವ ಕುರಿತು ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಅನಧಿಕೃತ ಶಾಲೆಗಳ ಬಗ್ಗೆ ಕ್ರಮವಹಿಸುವ ಕಾರ್ಯದಲ್ಲಿ ವಿಳಂಬಕ್ಕೆ ಆಸ್ಪದ ನೀಡದೇ ವೈಯಕ್ತಿಕ ಗಮನಹರಿಸಿ ನಿಗದಿತ ದಿನಾಂಕದೊಳಗೆ ಮಾಹಿತಿಯನ್ನು ಕಚೇರಿಗೆ ಸಲ್ಲಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

 

Related posts

ಡೀಪ್ ಫೇಕ್: ಕೇಂದ್ರದಿಂದ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ಗಳಿಗೆ 7 ದಿನದ ಗಡುವು..

ಬರ, ಕಾವೇರಿ ಎಲ್ಲದಕ್ಕೂ ಕೇಂದ್ರದತ್ತ ಬೊಟ್ಟು: ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಬೊಮ್ಮಾಯಿ ಕಿಡಿ.

ಹುಲಿ ಉಗುರು ಪ್ರಕರಣ:  ನಟ ಹಾಗೂ ಸಂಸದ ಜಗ್ಗೇಶ್ ಗೆ ರಿಲೀಫ್