ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

7ನೇ ವೇತನ ಆಯೋಗ: ವೇತನ, ಭತ್ಯೆಗಳ ಏರಿಕೆಗಳ ಬೇಡಿಕೆ: KSGEA ಕೊಟ್ಟ ಸಲಹೆಗಳೇನು..?

ಬೆಂಗಳೂರು: ರಾಜ್ಯ 7ನೇ ವೇತನ ಆಯೋಗದ ಮುಂದೆ ವೇತನ, ಭತ್ಯೆಗಳ ಏರಿಕೆಗಳ ಬೇಡಿಕೆಗಳನ್ನಿಟ್ಟಿರುವ ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘವು ಆಡಳಿತ ಸುಧಾರಣೆ ಕುರಿತಂತೆ ಸಹ ಕೆಲವು ಸಲಹೆಗಳನ್ನು ನೀಡಿದೆ. 

ಹೌದು, ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗಕ್ಕೆ ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ ಕೆಲ ಸಲಹೆಗಳನ್ನ ನೀಡಿದೆ.  ಕರ್ನಾಟಕ ಸರ್ಕಾರ ಸಚಿವಾಲಯ ಸೇವೆಯನ್ನು ಕರ್ನಾಟಕ ಆಡಳಿತ ಸೇವೆಯ ಮಾದರಿಯಲ್ಲಿಯೇ ಗುರುತಿಸಬೇಕು. ಕೇಂದ್ರ ಸಚಿವಾಲಯದಲ್ಲಿ ಹಾಗೂ ನಮ್ಮ ನೆರೆಯ ರಾಜ್ಯಗಳ ಸಚಿವಾಲಯದಲ್ಲಿ ಹಿರಿಯ ಸಹಾಯಕ ಹುದ್ದೆಯ ಪದನಾಮವು ಸಹಾಯಕ ಶಾಖಾಧಿಕಾರಿಯಾಗಿದ್ದಲ್ಲದೇ, ಅದೊಂದು ಗ್ರೂಪ್-ಬಿ ನಾನ್ ಗೆಜೆಟೆಡ್ ಹುದ್ದೆಯಾಗಿರುತ್ತದೆ. ತತ್ಸಂಬಂಧ ಹಿರಿಯ ಸಹಾಯಕ ಹುದ್ದೆಯ ಪದನಾಮವನ್ನು ‘ಸಹಾಯಕ ಶಾಖಾಧಿಕಾರಿ’ ಎಂದು ಬದಲಾಯಿಸಿ ಕೇಂದ್ರ ಹಾಗೂ ನೆರೆ ರಾಜ್ಯಗಳಂತೆ ಗ್ರೂಪ್ ‘ಬಿ’ ನಾನ್ ಗೆಜೆಟೆಡ್ ಹುದ್ದೆಯನ್ನಾಗಿ ಉನ್ನತೀಕರಿಸುವುದು ಸುಗಮ ಆಡಳಿತಕ್ಕೆ ಅತ್ಯಂತ ಸೂಕ್ತವಾಗಿರುತ್ತದೆ ಎಂದು ಹೇಳಿದೆ.

ಸಚಿವಾಲಯ ಸೇವೆಯು ರಾಜ್ಯ ಸರ್ಕಾರದ ಸೇವೆಗಳಲ್ಲಿಯೇ ಅತ್ಯಂತ ಜವಾಬ್ದಾರಿಯುತ ಹಾಗೂ ಮಹತ್ವಪೂರ್ಣವಾದ ಸೇವೆಯಾಗಿರುವುದರಿಂದ ಸಚಿವಾಲಯ ಸೇವೆಯ ಎಲ್ಲಾ ವೃಂದಗಳಿಗೂ ಪ್ರತ್ಯೇಕ ವೇತನ ಶ್ರೇಣಿಗಳು ನಿಗದಿಯಾಗಬೇಕು. ಸಚಿವಾಲಯದ ಅಧೀನ ಕಾರ್ಯದರ್ಶಿ ಹುದ್ದೆಯು ಅಸಿಸ್ಟೆಂಟ್ ಕಮೀಷನರ್ ಹುದ್ದೆಗೆ ಸರಿಸಮವೆಂದು ಪರಿಗಣಿಸಿ, ಅಸಿಸ್ಟೆಂಟ್ ಕಮೀಷನರ್ ವೇತನ ಶ್ರೇಣಿಯನ್ನು ಅಧೀನ ಕಾರ್ಯದರ್ಶಿ ಹುದ್ದೆಗಳಿಗೆ ನೀಡಬೇಕು ಎಂದು ವರದಿಯಲ್ಲಿ ಮನವಿ ಮಾಡಲಾಗಿದೆ.

ಸಚಿವಾಲಯ ಸೇವೆಗೆ ಪ್ರತ್ಯೇಕ ನೇಮಕಾತಿ ಆಗಬೇಕು. ಆರಂಭಿಕ ಹುದ್ದೆಗಳಾದ ಕಿರಿಯ ಸಹಾಯಕ ಮತ್ತು ಸಹಾಯಕ ಹುದ್ದೆಗಳಿಗೆ ಸಚಿವಾಲಯ ಸೇವೆಗೆ ಸೇರ್ಪಡೆಯಾಗುವ ಅಭ್ಯರ್ಥಿಗಳಿಗೆ ವಿಶೇಷ ಪರೀಕ್ಷಾ ಪಠ್ಯಗಳನ್ನು ರೂಪಿಸಬೇಕು. ಮುಂದುವರೆದು ಸಹಾಯಕ ಮತ್ತು ಕಿರಿಯ ಸಹಾಯಕ ಹುದ್ದೆಗಳ ಪದನಾಮವನ್ನು ಕ್ರಮವಾಗಿ ಹಿರಿಯ ಸಚಿವಾಲಯ ಸಹಾಯಕ (Senior Secretariat Assistant) ಮತ್ತು ಕಿರಿಯ ಸಚಿವಾಲಯ ಸಹಾಯಕ (Junior Secretariat Assistant) ಆಗಿ ಬದಲಾಯಿಸಬೇಕು ಎಂದು ಸಲಹೆ ನೀಡಿದೆ.

ಪ್ರಸ್ತುತ ಸಚಿವಾಲಯದಲ್ಲಿ ಸೃಜಿಸಲಾಗಿರುವ ಹುದ್ದೆಗಳು ಮತ್ತು ಅವುಗಳ ಕಾರ್ಯಭಾರಗಳನ್ನು ಅನೇಕ ವರ್ಷಗಳಿಂದ ಪುನರ್ ವಿಮರ್ಶೆ ಮಾಡಿರುವುದಿಲ್ಲ. ಸಚಿವಾಲಯದ ಹಲವಾರು ಇಲಾಖೆಗಳಲ್ಲಿ ಕಾರ್ಯಭಾರದ ತೀವ್ರ ಒತ್ತಡವಿದ್ದು, ಹೊರಗುತ್ತಿಗೆ ಆಧಾರದ ನೌಕರರು, ಗುತ್ತಿಗೆ ಆಧಾರದ ನೌಕರರು, ನಿವೃತ್ತ ಅಧಿಕಾರಿಗಳು ಕನ್ಸಟೆಂಟ್ಸ್ ಆಗಿ ಕಾರ್ಯ ನಿರ್ವಹಿಸುವುದು, ಮುಂತಾದ ಅವೈಜ್ಞಾನಿಕ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡಿಸುವ ಮೂಲಕ ಸರ್ಕಾರದ ಕೆಲಸಗಳನ್ನು ನಿರ್ವಹಿಸಲಾಗುತ್ತಿದೆ. ಈ ಪದ್ಧತಿಯಿಂದ ಸಚಿವಾಲಯದಲ್ಲಿ ಗೌಪ್ಯತೆಗೆ ಹಾಗೂ ಘನೆತೆಗೆ ಧಕ್ಕೆ ಅಗುತ್ತದೆ. ಈ ಹಿನ್ನಲೆಯಲ್ಲಿ ಈ ರೀತಿಯ ಅನಧಿಕೃತ ನೇಮಕಾತಿಗಳನ್ನು ಕೂಡಲೇ ಸ್ಥಗಿತಗೊಳಿಸಿ, ಅಗತ್ಯತೆಗೆ ಅನುಗುಣವಾಗಿ ಹುದ್ದೆಗಳ ಸೃಜನೆಯಾಗಬೇಕು ಮತ್ತು ಕಾಲಮಿತಿಯಲ್ಲಿ ಈ ಹುದ್ದೆಗಳು ಭರ್ತಿಯಾಗಲು ಕ್ರಮವಹಿಸಬೇಕು.

ಅಧೀನ ಕಾರ್ಯದರ್ಶಿ ಹುದ್ದೆಯ ಆರಂಭಿಕ ವೇತನ ಶ್ರೇಣಿ ಹಾಗೂ ಉಪ ಕಾರ್ಯದರ್ಶಿ ಹುದ್ದೆಯ ಆರಂಭಿಕ ವೇತನ ಶ್ರೇಣಿಗೆ ಸರಿಸುಮಾರು 4 ಹಂತಗಳ ವ್ಯತ್ಯಾಸವಿದ್ದು, ಅಧೀನ ಕಾರ್ಯದರ್ಶಿ ವೇತನ ಶ್ರೇಣಿಯನ್ನು ಒಂದು ಹಂತಕ್ಕೆ ಹೆಚ್ಚಿಸಬೇಕು. ಶಾಖಾಧಿಕಾರಿ ಹಾಗೂ ಅದಕ್ಕೂ ಮೇಲ್ಪಟ್ಟ ಅಂದರೆ ಅಧೀನ ಕಾರ್ಯದರ್ಶಿ, ಉಪ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಅಪರ ಕಾರ್ಯದರ್ಶಿ ಹಂತದ ಹುದ್ದೆಗಳಿಗೆ ಗರಿಷ್ಟ 5 ವರ್ಷಗಳಿಗೆ ಸೆಲೆಕ್ಷನ್ ಗ್ರೇಡ್ ಮುಂಬಡ್ತಿ ನೀಡುವಂತಾಗಬೇಕು ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

 

Related posts

7ನೇ ವೇತನ ಆಯೋಗದ ವರದಿ ನವೆಂಬರ್ ಅಂತ್ಯಕ್ಕೆ ಸಲ್ಲಿಕೆಯಾಗುವ ಸಾಧ್ಯತೆ : ಎಸ್. ಷಡಕ್ಷರಿ ವಿಶ್ವಾಸ

ನಾಳಿನ ಕರ್ನಾಟಕ ಬಂದ್ ಗೆ ಶಿವಮೊಗ್ಗ ಜಿಲ್ಲೆಯ ವಿವಿಧ ಸಂಘಟನೆಗಳಿಂದ ಬೆಂಬಲ

ಒಂದೇ ಕಡೆ 10 ವರ್ಷ ಪೂರೈಸಿದ ಶಿಕ್ಷಕರ ಕಡ್ಡಾಯ ವರ್ಗಾವಣೆಗೆ ಸಿದ್ಧತೆ.