ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

7ನೇ ವೇತನ ಆಯೋಗ: ಶೇ 38 ರಿಂದ 40ರಷ್ಟು ವೇತನ ಹೆಚ್ಚಳ ನಿರೀಕ್ಷೆ: ವರದಿ ಸಲ್ಲಿಕೆ ಯಾವಾಗ..?

ಬೆಂಗಳೂರು: ಸರ್ಕಾರ ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ಮತ್ತು ನೂತನ ವೇತನ ರಚನೆ ಇತ್ಯಾದಿಗಳನ್ನು ರೂಪಿಸಲು ಸುಧಾಕರ್ ರಾವ್ ಅಧ್ಯಕ್ಷತೆಯ 7ನೇ ರಾಜ್ಯ ವೇತನ ಆಯೋಗ ರಚನೆ ಮಾಡಿದ್ದು. ಶೇ 38 ರಿಂದ 40ರಷ್ಟು ವೇತನ ಹೆಚ್ಚಳ ನಿರೀಕ್ಷೆಯನ್ನ ಸರ್ಕಾರಿ ನೌಕರರು ಹೊಂದಿದ್ದು, ನವೆಂಬರ್ ಅಂತ್ಯದ ವೇಳೆಗೆ ವೇತನ ಹೆಚ್ಚಳಕ್ಕೆ ಪೂರಕವಾಗಿರುವ ವರದಿ ಸಲ್ಲಿಸಲಿದೆ ಎಂದು  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ತಿಳಿಸಿದ್ದಾರೆ.

ವೇತನ ಹೆಚ್ಚಳದ ಕುರಿತು ಸಿ. ಎಸ್. ಷಡಾಕ್ಷರಿ ಮಾತನಾಡಿದ್ದಾರೆ. “ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸಿನ ಅನ್ವಯ ಶೇ 38 ರಿಂದ 40ರಷ್ಟು ವೇತನ ಹೆಚ್ಚಾಗುವ ವಿಶ್ವಾಸವಿದೆ. ಸರ್ಕಾರ ರಚನೆ ಮಾಡಿರುವ 7ನೇ ವೇತನ ಆಯೋಗ ನವೆಂಬರ್ ಅಂತ್ಯದ ವೇಳೆಗೆ ವೇತನ ಹೆಚ್ಚಳಕ್ಕೆ ಪೂರಕವಾಗಿರುವ ವರದಿ ಸಲ್ಲಿಸಲಿದೆ. ಸಮಿತಿಯ ಸದಸ್ಯರನ್ನು ಭೇಟಿ ಮಾಡಿ ಶೇ 38 ರಿಂದ 40ವೇತನ ಹೆಚ್ಚಳಕ್ಕೆ ಮನವಿ ಮಾಡಲಾಗಿದೆ” ಎಂದು ಸಿ. ಎಸ್. ಷಡಾಕ್ಷರಿ ತಿಳಿಸಿದ್ದಾರೆ.

“ಒಂದು ದಿನದ ಮುಷ್ಕರ ನಡೆಸಿದ ಫಲವಾಗಿ ಮಧ್ಯಂತರ ಪರಿಹಾರ ಸಿಕ್ಕಿದೆ. 7ನೇ ವೇತನ ಆಯೋಗದ ವರದಿ ಜಾರಿ ಹಾಗೂ ಒಪಿಎಸ್ ಮರು ಜಾರಿ ನಮ್ಮ ಪ್ರಮುಖ ಬೇಡಿಕೆಗಳಾಗಿವೆ. ರಾಜ್ಯ ಸರ್ಕಾರಿ ನೌಕರರ ಕುಟುಂಬಗಳಿಗೆ ಆಸ್ಪತ್ರೆಯಲ್ಲಿ ಕ್ಯಾಶ್ ಲೆಸ್ ಚಿಕಿತ್ಸೆ ಸಿಗುವ ಯೋಜನೆ ಈ ತಿಂಗಳ ಅಂತ್ಯದೊಳಗೆ ಜಾರಿಯಾಗಲಿದೆ” ಎಂದರು.

ಆಯೋಗದ ಅವಧಿ ವಿಸ್ತರಣೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ 7ನೇ ರಾಜ್ಯ ವೇತನ ಆಯೋಗ ರಚನೆ ಮಾಡಲಾಗಿತ್ತು. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮುಗಿದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹೊಸ ಸರ್ಕಾರ ಆಯೋಗಕ್ಕೆ ನಿಗದಿಪಡಿಸಿರುವ ಕಾಲಾವಧಿಯನ್ನು ದಿನಾಂಕ 19/5/2023 ರಿಂದ 6 ತಿಂಗಳು ವಿಸ್ತರಣೆ ಮಾಡಿದೆ.

ರಾಜ್ಯ 7ನೇ ವೇತನ ಆಯೋಗ ತನ್ನ ಪರಿಶೀಲನಾ ಅಂಶಗಳ ಹಿನ್ನಲೆಯಲ್ಲಿ ಸರ್ಕಾರಿ ನೌಕರರಿಗೆ ಪ್ರಶ್ನಾವಳಿಯನ್ನು ಬಿಡುಗಡೆ ಮಾಡಿತ್ತು. ಈ ಪ್ರಶ್ನಾವಳಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಈಗಾಗಲೇ ಉತ್ತರಗಳನ್ನು ಸಲ್ಲಿಕೆ ಮಾಡಿದೆ. ವೇತನ ಆಯೋಗ ವೇತನ, ಭತ್ಯೆ, ಪಿಂಚಣಿ, ರಜೆ ಸೌಲಭ್ಯ ಸೇರಿದಂತೆ ವಿವಿಧ ವಿಚಾರಗಳ ಸರ್ಕಾರದ ವಿವಿಧ ಇಲಾಖೆಗಳ ನೌಕರರ ಜೊತೆ ಸಭೆ ನಡೆಸುತ್ತಿದೆ.

ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಪರಿಷತ್ ಕಲಾಪದಲ್ಲಿ 7ನೇ ವೇತನ ಆಯೋಗದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಈ ಸಮಿತಿಗೆ ನಿಗದಿಪಡಿಸಲಾದ ಕಾಲಮಿತಿ ಎಷ್ಟು?. ಸಮಿತಿಯ ವರದಿಯನ್ನು ಯಾವಾಗ ನಿರೀಕ್ಷಿಸಬಹುದು? ಎಂದು ಪ್ರಶ್ನಿಸಲಾಗಿತ್ತು.                 ಸಿದ್ದರಾಮಯ್ಯ ಉತ್ತರ ನೀಡುವಾಗ, “ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಪರಿಶೀಲಿಸಿ 6 ತಿಂಗಳ ಕಾಲಮಿತಿಯಲ್ಲಿ ವರದಿಯನ್ನು ಸಲ್ಲಿಸಲು, ತ್ರಿಸದಸ್ಯರ 7ನೇ ರಾಜ್ಯ ವೇತನ ಆಯೋಗವನ್ನು ರಚಿಸಿ ದಿನಾಂಕ 19/11/2022 ರಂದು ಆದೇಶಿಸಲಾಗಿತ್ತು. ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸ್ವಾಯತ್ತ ಸಂಸ್ಥೆಗಳೊಂದಿಗೆ ಸಮಾಲೋಚಿಸಲು ನಿಗದಿಪಡಿಸಿರುವ ಕಾಲಾವಧಿಯನ್ನು ಪುನರ್ ಪರಿಶೀಲಿಸಿ ಆಯೋಗಕ್ಕೆ ನಿಗದಿಪಡಿಸಿರುವ ಕಾಲಾವಧಿಯನ್ನು ದಿನಾಂಕ 19/5/2023 ರಿಂದ 6 ತಿಂಗಳು ವಿಸ್ತರಣೆ ಮಾಡಲಾಗಿದೆ” ಎಂದು ಹೇಳಿದ್ದಾರೆ.

 

Related posts

ಕಾಂಗ್ರೆಸ್ ಸೋಲಿಸುವ ಉದ್ದೇಶದಿಂದ ಜೆಡಿಎಸ್‍ ಜೊತೆ ಮೈತ್ರಿ- ಕೆಎಸ್ ಈಶ್ವರಪ್ಪ

ಬಡವರಿಗೆ ನಿವೇಶನ ನೀಡುವವರೆಗೂ ಖಾಸಗಿಯವರಿಗೆ ಲೇಔಟ್ ನಿರ್ಮಿಸಲು ಅನುಮತಿ ನೀಡದಂತೆ ಸಚಿವ ಬೈರತಿ ಸುರೇಶ್  ಖಡಕ್ ಸೂಚನೆ-: ಕೃತಜ್ಞತೆ ಸಲ್ಲಿಸಿದ ಪಾಲಿಕೆ ಸದಸ್ಯೆ ರೇಖಾ ರಂಗನಾಥ್ 

ಉದ್ದಿಮೆಗಳ ಅಭಿವೃದ್ಧಿಗೆ ಕೌಶಲ್ಯತೆ ಬಹಳ ಪ್ರಮುಖ-ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ