ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಸೆ.18ರಿಂದ 25ರವರೆಗೆ ಸಂಭ್ರಮ, ಸಡಗರ ಹಾಗೂ ಸಂಗೀತ ಕಾರ್ಯಕ್ರಮಗಳ ಮೂಲಕ 76ನೇ ಗಣೇಶೋತ್ಸವ.

ಶಿವಮೊಗ್ಗ: ಶ್ರೀ ವಿದ್ಯಾಗಣಪತಿ ಸೇವಾ ಸಂಘದ ವತಿಯಿಂದ ಈ ಬಾರಿ 76ನೇ ಗಣೇಶೋತ್ಸವವನ್ನು ಸೆ.18ರಿಂದ 25ರವರೆಗೆ ಸಂಭ್ರಮ, ಸಡಗರ ಹಾಗೂ ಸಂಗೀತ ಕಾರ್ಯಕ್ರಮಗಳ ಮೂಲಕ ಆಚರಿಸಲಾಗುವುದು ಎಂದು ಸೇವಾ ಸಂಘದ ಕಾರ್ಯದರ್ಶಿ ಹೆಚ್.ಆರ್. ಸುಬ್ರಹ್ಮಣ್ಯ ಶಾಸ್ತ್ರಿ ಹೇಳಿದರು.
ಅವರು ಇಂದು ಹೋಟೆಲ್ ಮಥುರಾ ಪ್ಯಾರಾಡೈಸ್‍ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ನಗರದ ಪ್ರತಿಷ್ಠಿತ ಶ್ರೀ ವಿದ್ಯಾಗಣಪತಿ ಸೇವಾ ಸಂಘವು ಕಳೆದ 75 ವರ್ಷಗಳನ್ನು ಪೂರೈಸಿದ್ದು, ಅಮೃತ ಮಹೋತ್ಸವದ ಅಂಗವಾಗಿ 75 ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರೈಸಿ ಈಗ 76ನೇ ವರ್ಷದ ಗಣೇಶೋತ್ಸವವನ್ನು ಆಚರಿಸಲು ಸಿದ್ಧರಾಗಿದ್ದೇವೆ ಎಂದರು.
ಸೆ.18ರಂದು ಗಣಪತಿ ಪ್ರತಿಷ್ಠಾಪನೆ ಮಾಡಲಾಗುವುದು. 19ರಿಂದ 25ರ ವರೆಗೆ ನಗರದ ಕೋಟೆ ಮಾರಿಕಾಂಬಾ ದೇವಸ್ಥಾನದ ಸಭಾಭವನದಲ್ಲಿ ಪ್ರತಿದಿನ ಸಂಜೆ 5-30ರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಂಗೀತ ದಿಗ್ಗಜರು ಭಾಗವಹಿಸಲಿದ್ದಾರೆ ಎಂದರು.
19ರಂದು ಸಂಜೆ 5-30ಕ್ಕೆ ಹರಕೋಡು ವೀಣಾ ಮಾಧವ ಅವರಿಂದ ಸ್ಯಾಕ್ಸೋಫೋನ್, 6-30ಕ್ಕೆ ಪದ್ಮಶ್ರೀ ಹರಿಪ್ರಸಾದ್ ಚೌರಾಸಿಯಾ ಅಣ್ಣನ ಮಗ ಪಂಡಿತ್ ರಾಕೇಶ್ ಚೌರಾಸಿಯಾ, ಹಿಂದೂಸ್ಥಾನಿ ಕೊಳಲು ವಾದನ ಆಯೋಜಿಸಲಾಗಿದೆ.
20ರಂದು ರೇಣುಕಾ ಆರ್. ಕಾರಂತ್, ಧಾತ್ರಿಕುಮಾರ್ ಅವರಿಂದ ಹಿಂದೂಸ್ತಾನಿ ಗಾಯನ, 21ರಂದು ಸೌಮ್ಯ ಕೇಶವ, ಹೊಸಹಳ್ಳಿ ಕಾರ್ತಿಕ್ ಅವರಿಂದ ಹಾಡುಗಾರಿಕೆ, 22ರಂದು ಸುಜಾತಾ ಚಿದಂಬರ, ಚೆನ್ನೈನ ವಸುಧಾ ರವಿ ಅವರಿಂದ ಹಾಡುಗಾರಿಕೆ, 23ರಂದು ವಾಣಿ ಮತ್ತು ನಿಹಾರಿಕಾ ಅವರಿಂದ ಯುಗಳ ವೀಣಾ ವಾದನ, ವೈ.ಜಿ. ಶ್ರೀಲತಾ ಅವರಿಂದ ವೀಣಾ ವಾದನ ಆಯೋಜಿಸಲಾಗಿದೆ ಎಂದರು.
24ರಂದು ಪೂಜಿತ್ ತೇಜಸ್ವಿ, ಚೆನ್ನೈನ ವಿವೇಕ್ ಸದಾಶಿವಂ ಅವರಿಂದ ಹಾಡುಗಾರಿಕೆ., 25ರಂದು ಪಿ. ಚಂದ್ರಜ್ಯೋತಿ ಮತ್ತು ಮೇಧಾ ಮಂಜುನಾಥ್ ಅವರಿಂದ ಹಾಡುಗಾರಿಕೆ ಇರುತ್ತದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಪಿಟೀಲು, ಮೃದಂಗ, ಘಟಂ ಸೇರಿದಂತೆ ಪಕ್ಕವಾದ್ಯಗಳು ಇರುತ್ತವೆ ಎಂದರು.
ಸಮಿತಿಯ ಅಧ್ಯಕ್ಷ ಪ್ರೊ. ಹೆಚ್.ಆರ್. ಶಂಕರನಾರಾಯಣ ಶಾಸ್ತ್ರಿ ಮಾತನಾಡಿ, 26ರಂದು ಸಂಜೆ 6-30ಕ್ಕೆ ರಾಜಬೀದಿ ಉತ್ಸವದ ಮೂಲಕ ಗಣಪತಿಯನ್ನು ವಿಸರ್ಜನೆ ಮಾಡಲಾಗುವುದು. ಶ್ರೀ ವಿದ್ಯಾ ಗಣಪತಿ ಸೇವಾ ಸಂಘವು ಕಳೆದ 75 ವರ್ಷಗಳಿಂದ ಸಂಗೀತ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕ ಗಣಪತಿಯನ್ನು ಪ್ರತಿಷ್ಠಾಪಿಸಿ ವಿಸರ್ಜನೆ ಮಾಡಲಾಗುತ್ತಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಶಿವಮೊಗ್ಗದ ಸಂಗೀತಾಸಕ್ತರು ಹಾಗೂ ಭಕ್ತರು ತಮ್ಮ ತನುಮನ ಧನಗಳಿಂದ ನಮಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಕೋಟೆ ಮಾರಿಕಾಂಬಾ ದೇವಸ್ಥಾನದ ಸಮಿತಿಯವರು ಕೂಡ ನಮಗೆ ಪ್ರೋತ್ಸಾಹ ನೀಡಿದ್ದಾರೆ. ಎಲ್ಲರಿಗೂ ನಮ್ಮ ಕೃತಜ್ಞತೆಗಳು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಶ್ರೀಕಂಠ ಜೋಯಿಸ್, ಎಸ್.ಜಿ.ಆನಂದ, ಹೆಚ್.ಡಿ. ಮೋಹನ ಶಾಸ್ತ್ರಿ, ಡಿ.ಎಸ್. ನಟರಾಜ್ ಇದ್ದರು.

Related posts

ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ನಾನು ಪ್ರಬಲ ಆಕಾಂಕ್ಷಿ: ಟಿಕೆಟ್ ಸಿಗುವ ಭರವಸೆ ಇದೆ- ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ. ರಮೇಶ್ ಶೆಟ್ಟಿ

ಮೌಲ್ಯಾಂಕನ ವಿಶ್ಲೇಷಣೆ ಬಿಡುಗಡೆ: ಸರ್ಕಾರಿ ಶಾಲೆ ವಿದ್ಯಾರ್ಥಿಗಳೇ ಬೆಸ್ಟ್..!

ದೇಶದ ಇತರ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಮದ್ಯದ ಬೆಲೆ ಹೆಚ್ಚು: ಗೋವಾದಲ್ಲಿ ಅಗ್ಗ..