ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ನ.26ರಿಂದ 28ರ ವರೆಗೆ 72 ಗಂಟೆಗಳ ಮಹಾಧರಣಿ.

ಶಿವಮೊಗ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತವಿರೋಧಿ ನೀತಿಗಳನ್ನು ವಿರೋಧಿಸಿ ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ನ.26ರಿಂದ 28ರ ವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ 72 ಗಂಟೆಗಳ ಮಹಾಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಹೇಳಿದರು.
ಅವರು ಇಂದು ಮೀಡಿಯಾ ಹೌಸ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೈತಸಂಘಟನೆಗಳು, ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ದೇಶದ ಎಲ್ಲಾ ರಾಜ್ಯಗಳಲ್ಲೂ ಆ ದಿನಗಳಂದು ಮಹಾಧರಣಿ ನಡೆಯಲಿದೆ ಎಂದರು.
ಕೇಂದ್ರ ಸರ್ಕಾರವಾಗಲಿ, ರಾಜ್ಯಸರ್ಕಾರವಾಗಲಿ ರೈತರ ನೆರವಿಗೆ ಬರುತ್ತಿಲ್ಲ. ಕೇಂದ್ರ ಸರ್ಕಾರದ ಬಂಡವಾಳ ಪರ ನೀತಿಗಳು ರೈತರನ್ನು ಸಂಕಷ್ಟಕ್ಕೆ ದೂಡಿವೆ.ಜಿಎಸ್‍ಟಿಯಿಂದ ಸಾಮಾನ್ಯರಿಗೂ ಹೊರೆಯಾಗಿದೆ. ಬೆಲೆ ಏರಿಕೆಯಾಗಿದೆ. ರೈತಾಪಿ ವರ್ಗವನ್ನು ಸಾಲದ ಸುಳಿಗೆ ಸಿಲುಕಿಸಿದೆ. ಕೇಂದ್ರ ಸರ್ಕಾರ ಮೂರು ಕೃಷಿ ಕಾಯಿದೆಗಳನ್ನು ವಾಪಾಸು ಪಡೆದರೂ ಕೂಡ ಕನಿಷ್ಟ ಬೆಂಬಲಬೆಲೆ ಕಾಯ್ದೆ ಜಾರಿ ಮಾಡಿಲ್ಲ ಎಂದು ದೂರಿದರು.
ಕರ್ನಾಟಕ ಸರ್ಕಾರ ಕೂಡ ರೈತವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಮೂರು ಕೃಷಿ ಕಾಯಿದೆಗಳನ್ನು ವಾಪಾಸು ಪಡೆಯತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದರೂ ಕೂಡ ವಾಪಾಸು ಪಡೆದಿಲ್ಲ. ವಿದ್ಯುತ್ ಕಾಯಿದೆಯನ್ನು ಖಾಸಗೀಕರಣ ಮಾಡುವುದಿಲ್ಲ ಎಂದು ಹೇಳಿ ಮಾತಿಗೆ ತಪ್ಪಿದೆ. ಬರಗಾಲವಿದ್ದರೂ ಪರಿಹಾರ ನೀಡಿಲ್ಲ. ರೈತರ ಐಪಿ ಸೆಟ್ ವೆಚ್ಚವನ್ನು ರೈತರೇ ಭರಿಸಬೇಕು ಎಂದು ಹೇಳಿರುವುದು ಖಂಡನೀಯ. ಸರ್ಕಾರ ಗ್ಯಾರಂಟಿ ಯೋಜನೆಗಳ ಭ್ರಮೆಯಲ್ಲಿ ತೇಲುತ್ತಿದೆ ಎಂದು ದೂರಿದರು.
ಕೇಂದ್ರ ಸರ್ಕಾರ ವಿದ್ಯುತ್ ಶಕ್ತಿ ಮೇಲಿನ ಸಬ್ಸಿಡಿ ಹೆಚ್ಚಿಸಬೇಕು. ಕನಿಷ್ಟ ಬೆಂಬಲ ಬೆಲೆಯ ಕಾಯಿದೆಯನ್ನು ಜಾರಿಗೊಳಿಸಬೇಕು. ರೈತರ ಎಲ್ಲಾ ಸಾಲಗಳನ್ನು ಮನ್ನಾ ಮಾಡಬೇಕು. ದೆಹಲಿ ಹೋರಾಟದ ಸಂದರ್ಭದಲ್ಲಿ ರೈತರ ಮೇಲೆ ಹಾಕಿರುವ ಎಲ್ಲಾ ಕೇಸುಗಳನ್ನು ವಾಪಾಸು ಪಡೆಯಬೇಕು. ಅರಣ್ಯ ಹಕ್ಕು ತಿದ್ದುಪಡಿಗೆ ಕಾಯಿದೆ ತಂದು ಹಕ್ಕುಪತ್ರ ನೀಡಬೇಕು. ಉದ್ಯೋಗ ಸೃಷ್ಟಿಗೆ ಆತಿಥ್ಯ ನೀಡಬೇಕು. ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ವ್ಯವಸ್ಥೆ ರದ್ದುಮಾಡಿ ಹಳೆ ಪಿಂಚಣಿ ವ್ಯವಸ್ಥೆ ಜಾರಿ ಮಾಡಬೇಕು. ಉಚಿತ ಶಿಕ್ಷಣ ಆರೋಗ್ಯ ನೀಡಬೇಕು. ರಾಷ್ಟ್ರೀಯ ಶಿಕ್ಷಣ ನೀತಿ ರದ್ದಾಗಬೇಕು ಎಂದು ಆಗ್ರಹಿಸಿದರು.
ಹಾಗೆಯೇ ರಾಜ್ಯ ಸರ್ಕಾರ ಕೂಡ ರೈತವಿರೋಧಿ ಮೂರು ಕೃಷಿ ಕಾಯಿದೆಗಳನ್ನು ರದ್ದುಮಾಡಬೇಕು. ವಿದ್ಯುತ್ ಖಾಸಗೀಕರಣ ಮಾಡಬಾರದು. ರೈತರ ಐಪಿ ಸೆಟ್‍ಗಳಿಗೆ ಸರ್ಕಾರವೇ ವೆಚ್ಚ ಭರಿಸಬೇಕು. ಅಡಿಗೆ ಅನಿಲದ ಮೇಲಿನ ತೆರಿಗೆ ಇಳಿಸಬೇಕು. ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಸಬೇಕು ಎಂದು ಒತ್ತಾಯಿಸಿದರು.
ಬೆಂಗಳೂರು ಫ್ರೀಡಂ ಪಾರ್ಕ್‍ನಲ್ಲಿ ನಡೆಯುವ ಮಹಾಧರಣಿಯಲ್ಲಿ ಶಿವಮೊಗ್ಗ ಜಿಲ್ಲೆಯಿಂದಲೂ ಕೂಡ ಸುಮಾರು 500ಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದಾರೆ. ಇಡೀ ರಾಜ್ಯದಿಂದ 1 ಲಕ್ಷಕ್ಕೂ ಹೆಚ್ಚು ರೈತರು ಈ ಧರಣಿಯಲ್ಲಿ ಪಾಲ್ಗೊಳ್ಳುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಹಿಟ್ಟೂರು ರಾಜು, ಕೆ. ರಾಘವೇಂದ್ರ, ಸಿ. ಚಂದ್ರಪ್ಪ, ಕಸೆಟ್ಟಿ ರುದ್ರೇಶ್ ಪುರದಾಳು ನಾಗರಾಜ್ ಇದ್ದರು.

Related posts

ನಾನು ವರ್ಗಾವಣೆ ದಂಧೆ ಮಾಡಿದ್ದು ಸಾಬೀತಾದ್ರ ರಾಜಕೀಯದಿಂದಲೇ ನಿವೃತ್ತಿ- ವೈರಲ್ ವಿಡಿಯೋ ಕುರಿತು ಸಿಎಂ ಸಿದ್ಧರಾಮಯ್ಯ ಸ್ಪಷ್ಟನೆ.

ಟ್ಯಾಂಕರ್ ಗೆ ಮದುವೆ ಮುಗಿಸಿ ಬರುತ್ತಿದ್ದ ಕಾರು ಡಿಕ್ಕಿ: ಐವರು ಸಾವು .

ರಾಗಿಗುಡ್ಡ ಘಟನೆ: ಪ್ರಚೋದನಾಕಾರಿ ಹೇಳಿಕೆಗಳಿಗೆ ಕಿವಿಗೊಡದೇ ಶಾಂತಿ ಕಾಪಾಡಬೇಕು-ಆಮ್ ಆದ್ಮಿ ಪಾರ್ಟಿ ಮನವಿ.